ವಿಜಯಪುರ: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳಷ್ಟೇ ಸಾಮಾಜಿಕ ನಾಟಕಗಳ ಪ್ರದರ್ಶನಕ್ಕೂ ಒತ್ತು ನೀಡಬೇಕು. ಆ ಮೂಲಕ ನಾಟಕ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಮಾಜಿ ಜಿ.ಪಂ ಅಧ್ಯಕ್ಷ ವಿ.ಎಸ್.ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ನ್ಯೂ ಹನುಮಾನ್ ನಾಟ್ಯ ಸಂಘದ ವತಿಯಿಂದ ಮೊಹರಂ ಹಬ್ಬದ ಅಂಗವಾಗಿ ನಡೆದ ಸಾಮಾಜಿಕ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಹಿಂದೆ ಪೌರಾಣಿಕ ನಾಟಕಗಳಷ್ಟೇ ಸಾಮಾಜಿಕ ನಾಟಕಗಳಿಗೂ ಆದ್ಯತೆ ನೀಡಲಾಗುತ್ತಿತ್ತು. ಈಗಲೂ ಅದು ಮುಂದುವರಿಯಬೇಕು. ಗ್ರಾಮೀಣ ಕಲಾವಿದರು ಬೆಳಕಿಗೆ ಬರಬೇಕು ಎಂದರು. ಟಿಎಂಪಿಸಿ ಅಧ್ಯಕ್ಷ ಚನ್ನಪ್ಪ ಕೋಪ್ಪದ ಮಾತನಾಡಿ, ಇಂದಿನ ದಿನಗಳಲ್ಲಿ ಜನರು ಟಿ.ವಿಗೆ ಮೊರೆ ಹೋಗಿದ್ದಾರೆ ಆದರೆ ಅದರಲ್ಲಿನ ಕಾರ್ಯಕ್ರಮ ಒಮ್ಮೆ ನೋಡಬಹುದು ಆದರೆ ನಾಟಕ ತನ್ನ ಇತಿ-ಮಿತಿಯ ಒಳಗೆ ಪ್ರೇಕ್ಷ ಕರಿಗೆ ಖುಷಿಯನ್ನು ಕೊಡುತ್ತದೆ ಅಲ್ಲದೆ ಪ್ರತಿಪ್ರದರ್ಶನದಲ್ಲೂ ಹೊಸತನವಿರುತ್ತದೆ ಎಂದು ಹೇಳಿದರು. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಆಪ್ತ ಸಹಾಯಕ ಸಂತೋಷ ಲೋಕರಿ ಮಾತನಾಡಿ, ಸಂಗೀತ ಮತ್ತು ಕಲೆಗಳು ಚಂಚಲ ಮನಸ್ಸನ್ನು ದೂರ ಮಾಡಿ, ಏಕಾಗ್ರತೆ ಮೂಡಿಸುತ್ತದೆ. ಮನಸ್ಸನ್ನು ಉಲ್ಲಾಸ ಮೂಡಿಸುವ ಮೂಲಕ ಬದುಕನ್ನು ಹಸನಾಗಿಸಿ ಜೀವನದಲ್ಲಿ ಶಿಸ್ತು ಮೂಡಿಸುತ್ತವೆ ಎಂದರು. ಅಧ್ಯಕತೆ ಮಹೇಶ ಮಾಳಿ ವಹಿದ್ದರು. ನಿಡೋಣಿ ಗ್ರಾ.ಪಂ ಅಧ್ಯಕ್ಷ ಪರಪ್ಪ ಶಾಹಪೂರ, ರಜಾಕ ದಳವಾಯಿ, ಅಲ್ತಾಸಾಹೇಬ ಜಾಗೀರದಾರ, ವಿಜಯಕುಮಾರ್ ಕೊಪ್ಪದ, ರಾಜು ಗಲಗಲಿ, ಹಾಜೀಲಾಲ ಆಲಗೂರ ಮುಂತಾದವರು ಇದ್ದರು.