ಬೆಂಗಳೂರು:
ಕಬಿನಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸಿ ಕೆರೆ ಕಟ್ಟೆಗಳಿಗೆ ಕುಡಿಯುವ ಮತ್ತು ಜನ ಜಾನುವಾರುಗಳ ಉಪಯೋಗಕ್ಕಾಗಿ ಮಾತ್ರ ನೀರನ್ನು ಬಳಸಬೇಕು. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳಹರಿವಿನ ಪ್ರಮಾಣವನ್ನು ಆಧರಿಸಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ತೀರ್ಮಾನಿಸಲಾಗುತ್ತದೆ ಎಂದು ಕಬಿನಿ ನೀರಾವರಿ ಸಲಹಾ ಸಮಿತಿ ಮತ್ತು ವರಣಾ ನಾಲಾ ವೃತ್ತ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಮಹೇಶ್ ಕೆ ತಿಳಿಸಿದ್ದಾರೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಕೂಡ ಹೆಚ್ಚಾಗಿದೆ. ಹಾಗೆಯೇ ಕಬಿನಿ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆ ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. 2024-25ನೇ ಸಾಲಿನ ಖಾರೀಪ್ ಬೆಳೆಗಳಿಗೆ ನಾಲೆಗಳ ಮುಖೇನ ನೀರು ಬಿಡುವ ಬಗ್ಗೆ ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ಸಮಿತಿಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಕಬಿನಿ ನೀರಾವರಿ ಸಲಹಾ ಸಮಿತಿಯ ಕಬಿನಿ ಮತ್ತು ವರಣಾ ನಾಲಾ ವೃತ್ತ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಮಹೇಶ ಕೆ ತಿಳಿಸಿದ್ದಾರೆ.
2024-25ನೇ ಸಾಲಿನ ವರ್ಷದಲ್ಲಿ ಕಬಿನಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಜಲಾಶಯಕ್ಕೆ ಒಳಹರಿವು ಬರುತ್ತಿದೆ. ಒಳಹರಿವಿನ ನೀರಿನ ಪ್ರಮಾಣ ಹಾಗೂ ಒಟ್ಟಾರೆ ಜಲಾಶಯದಲ್ಲಿ ಸಂಗ್ರಹ ಆಗಿರುವ ನೀರಿನ ಲಭ್ಯತೆ ಮೇರೆಗೆ ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮುಖಾಂತರ ಜನ ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ಕೆರೆ-ಕಟ್ಟೆಗಳಿಗೆ ಜುಲೈ 10 ರಿಂದ 25ರವರೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ.