ವಿಜಯಪುರ: ಬಾಲಕಾರ್ಮಿಕ ಕಾಯ್ದೆಯಡಿ ನಿರೀಕ್ಷಕರಾಗಿ ನೇಮಕಗೊಂಡ ಕಾರ್ಮಿಕ ಇಲಾಖೆ ಅಧಿಕಾರಿಗಳು ಏ.20ರಂದು ವಿಜಯಪುರ ನಗರದಲ್ಲಿ ಅನಿರೀಕ್ಷಿತ ದಾಳಿ ನಡೆಸಿ, ಬಾಲಕಾರ್ಮಿಕ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ತಿಂಗಳು ಎಲ್ಲಾ ತಾಲೂಕುಗಳಲ್ಲಿ ಬಾಲಕಾರ್ಮಿಕ ದಾಳಿಯನ್ನು ಕೈಗೊಳ್ಳುತ್ತಿದ್ದು, ಅದರಂತೆ ಏ.20ರಂದು ವಿಜಯಪುರದಲ್ಲಿ ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸಲಾಗಿದ್ದು, ಬಾಲಕಾರ್ಮಿಕ ಮಾಲೀಕರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ದಾಳಿಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಕುಮಾರಿ ನೀಲಮ್ಮಾ ಖೇಡಗಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ.ಬಿರಾದಾರ, ಶ್ರೀಮತಿ ಸವಿತಾ ಅಳಗಿ, ಶ್ರೀಮತಿ ಶಕುಂತಲಾ ಬಗಲಿ, ವಿ.ಟಿ.ಭಾವಿಕಟ್ಟಿ, ಗುರುರಾಜ ಇಟಗಿ, ಈಶ್ವರಿ ಚಿನಿವಾಲರ ಸೇರಿದಂತೆ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.