ಹುಬ್ಬಳ್ಳಿ: ಹಿರಿಯ ಪತ್ರಕರ್ತ ಮೆಹಬೂಬ್ ಮುನವಳ್ಳಿ ಅವರನ್ನು ವಿಚಾರಣೆ ನೆಪದಲ್ಲಿ ದಾವಣಗೆರೆ ಜಿಲ್ಲಾ ಪೋಲಿಸರು ಕರೆದೊಯ್ದು ಬಂಧನ ಮಾಡಿರುವುದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮೌನಪ್ರತಿಭಟನೆ ನಡೆಸಿದರು. ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಪತ್ರಕರ್ತರ ಭವನದಿಂದ ನೂರಾರು ಪತ್ರಕರ್ತರು ತಹಶಿಲ್ದಾರರ ಕಚೇರಿವರೆಗೆ ಮೌನ ಮೆರವಣಿಗೆ ಹೋಗಿ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಸಂಗಮೇಶ ಮೆಣಸಿನಕಾಯಿ ಮಾತನಾಡಿ, ರಾಜ್ಯದಲ್ಲಿ ಇತ್ತಿಚೆಗೆ ಸುದ್ದಿಯನ್ನು ವರದಿ ಮಾಡಲು ತೆರಳುವ ಪತ್ರಕರ್ತರ ಮೇಲೆ ಕೆಲವು ಪೋಲಿಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಇದರಿಂದ ನಿರ್ಭಿತವಾಗಿ ವಸ್ತುನಿಷ್ಢ ವರದಿಗಳನ್ನು ಮಾಡಲು ವರದಿಗಾರರು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಮಾಧ್ಯಮದವರನ್ನು ಸಿಲುಕಿಸುವ ಪ್ರಕರಣಗಳು ನಡೆಯುತ್ತಿವೆ. ಅಂತಹುದೇ ಘಟನೆ ಪತ್ರಕರ್ತ ಮೆಹಬೂಬ್ ಮುನವಳ್ಳಿ ಅವರ ಪ್ರಕರಣದಲ್ಲಿ ಆಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ್ ಹೂಗಾರ ಮಾತನಾಡಿ, ವರದಿಗಾರರಿಗೆ ಕೆಲವು ರೌಡಿಗಳ ಮತ್ತು ಕಿಡಿಗೇಡಿಗಳ ಸಂಪರ್ಕದ ಸುದ್ದಿಗಷ್ಟೇ ಸೀಮಿತವಾಗಿರುತ್ತದೆ. ಇದು ಪತ್ರಿಕೋದ್ಯಮದ ಸತ್ಯ ವರದಿಯ ಪಾಠವಾಗಿದೆ. ಆದರೆ ಪೋಲಿಸರೊಂದಿಗೆ ಎಷ್ಟೇ ಸೌಹಾರ್ದಯುತವಾಗಿ ವರ್ತಸಿದರೂ ಪೋಲಿಸ್ ಇಲಾಖೆಯ ಕೆಲವು ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆ. ಇದರಿಂದಾಗಿ ನಿರ್ಭಿತ ಮತ್ತು ವಸ್ತುನಿಷ್ಠ ವರದಿ ಮಾಡಲು ಹೋದವರ ಮೇಲೆ ಪ್ರಕರಣ ದಾಖಲು ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಅಷ್ಟೇ ಅಲ್ಲದೇ ಇದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾದ್ಯಮದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಪತ್ರಕರ್ತರಿಗೆ ಹಾಗೂ ವಿದ್ಯುನ್ಮಾನ ಮಾಧ್ಯಮ ವರದಿಗಾರರಿಗೆ ಸರ್ಕಾರ ರಕ್ಷಣೆ ನೀಡಬೇಕು. ನ್ಯಾಯಪರ ವರ್ತಿಸುವಂತೆ ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಇದೀಗ ಮೆಹಬೂಬ್ ಮುನ್ನವೇ ಅವರನ್ನು ಬಂಧಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ಖಜಾಂಚಿ ಬಸವರಾಜ ಹೂಗಾರ, ಸದಸ್ಯರಾದ ಓದೇಶ ಸಕಲೇಶಪುರ, ಯಲ್ಲಪ್ಪ ಸೋಲಾರಗೊಪ್ಪ, ಶಿವಾನಂದ ಗೊಂಬಿ, ಶಿವರಾಮ ಅಸುಂಡಿ, ಅಬ್ಬಾಸ್ ಮುಲ್ಲಾ, ರಾಜು ಮುದುಗಲ್, ಮಹೇಂದ್ರ ಚೌಹಾನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.