ವಿಜಯಪುರ: ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಆರಾಧ್ಯ ದೈವವೆನ್ನಿಸಿರುವ ಸ್ಥಳೀಯ ಸದ್ಗುರು ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಭಾನುವಾರ ಸಂಜೆ ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ನೆರವೇರಿತು. ಭಾನುವಾರ ಬೆಳಿಗ್ಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪುರವಂತರ ಸೇವೆಯೊಂದಿಗೆ ಸಾಂಭಪ್ರಭು ಶರಣರ ಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಂಭಪ್ರಭು ದೇವಸ್ಥಾನವನ್ನು ತಲುಪಿತು. ಪಲ್ಲಕ್ಕಿ ಉತ್ಸವವು ದೇವಸ್ಥಾನ ತಲುಪುತ್ತಿದ್ದಂತೆ ದೇವಸ್ಥಾನದ ಪಂಚಪ್ರದಕ್ಷಿಣೆ ಹಾಕಿ ಕರ್ತೃ ಗದ್ದುಗೆಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ದೇವರಿಗೆ ನೈವೇದ್ಯವಾಗಿ ಸಿಹಿಮಾದಲಿ, ಹೋಳಿಗೆ, ಕಾಯಿ, ಕರ್ಪೂರ ಅರ್ಪಿಸಿದರು. ಅನೇಕರು ತಮ್ಮ ಮನೆಗಳಿಂದ ದೇವಸ್ಥಾನದವರೆಗೆ ಧೀಡ ನಮಸ್ಕಾರವನ್ನೂ ಹಾಕಿದರು. ರಥೋತ್ಸವದಲ್ಲಿ ನೇತೃತ್ವವನ್ನು ವಹಿಸಿದ್ದ ಸಾಂಭಪ್ರಭು ಶರಣರಮಠದ ಬಸಣ್ಣನವರು ಶರಣರು ಹಾಗೂ ಶರಣಪ್ಪನವರು ಶರಣರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಹಾಗೂ ರಥಕ್ಕೆ ಪೂಜಾ ವಿಧಾನಗಳು ನೆರವೇರಿಸಿದ ನಂತರ ಪಲ್ಲಕ್ಕಿ ಪಂಚ ಪ್ರದಕ್ಷಿಣದ ನಂತರ ಭಕ್ತಾದಿಗಳ ಹರ್ಷೋದ್ಘಾರದ ಮಧ್ಯೆ ರಥೋತ್ಸವ ಜರುಗಿತು. ಭಕ್ತಾದಿಗಳು ರಥಕ್ಕೆ ಉತ್ತತ್ತಿ, ಬಾಳೆ, ತೆಂಗು, ಕಬ್ಬುಗಳನ್ನು ಎಸೆದು ಸಂಭ್ರಮಿಸಿದರು. ಪೊಲೀಸ್ ಬಂದೋಬಸ್ತ್ನಲ್ಲಿ ಶಾಂತಿಯುತವಾಗಿ ಜಾತ್ರೆ ಜರುಗಿತು. ಜಾತ್ರೆಯ ಅಂಗವಾಗಿ ಐದು ದಿನಗಳ ಕಾಲ ದನಗಳ ಬೃಹತ್ ಜಾತ್ರೆ ಜರುಗುತ್ತಿದೆ. ಮಾ.26 ರಂದು ಶನಿವಾರ ಸಂಜೆ ಕಳಸ ಇಳಿಸಲಾಗುವುದು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.