ಶ್ರೀ ಬಸನಗೌಡ ಪಾಟೀಲ (ಯತ್ನಾಳ್ )ಮುಂದಿನ ರಾಜಕೀಯ ಭವಿಷ್ಯ ಶ್ರೀಶೈಲ್ ಮಲ್ಲಯ್ಯ ನಿರ್ಧರಿಸುವನೇ?

Karnataka 1 News
ಶ್ರೀ ಬಸನಗೌಡ ಪಾಟೀಲ (ಯತ್ನಾಳ್ )ಮುಂದಿನ ರಾಜಕೀಯ ಭವಿಷ್ಯ ಶ್ರೀಶೈಲ್ ಮಲ್ಲಯ್ಯ ನಿರ್ಧರಿಸುವನೇ?

*ಶ್ರೀ ಬಸನಗೌಡ ಪಾಟೀಲ (ಯತ್ನಾಳ) ಇವರ ಮುಂದಿನ ರಾಜಕೀಯ ಭವಿಷ್ಯವನ್ನು ಶ್ರೀಶೈಲ ಮಲ್ಲಯ್ಯನು ನಿರ್ಧರಿಸಲಿದ್ದಾನೆಯೇ?*

ಶ್ರೀಶೈಲ ಮಲ್ಲಯ್ಯನ ವಾಹನವಾದ ನಂದಿಯ ಸಂತತಿಯು ಪ್ರತಿಯೊಂದು ಗ್ರಾಮಗಳಲ್ಲಿ ಕ್ಷೀಣಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.‌ ಜೋಡೆತ್ತಿನ ಕೃಷಿಕರಿಗೆ ಪೂರಕವಾದ ಯಾವುದೇ ಕಾನೂನು ಹಾಗೂ ಯೋಜನೆಗಳು ಇಲ್ಲದಿರುವುದರಿಂದ ಇಂದು ರೈತರು ಜೋಡೆತ್ತಿನ ಕೃಷಿಯನ್ನು ತ್ಯಜಿಸುತ್ತಿದ್ದಾರೆ. ಇತ್ತೀಚೆಗೆ ಜನಪ್ರೀಯ ಯೋಜನೆಗಳು ಹೆಚ್ಚಾದಂತೆ ನಂದಿ ಸಂತತಿ ಉಳಿಸಿ ಬೆಳೆಸುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ವಿಜಯಪುರದ ಶ್ರೀ ಸಿದ್ಧೇಶ್ವರ ದನಗಳ ಜಾತ್ರೆಯು ಸಾಕ್ಷಿಯಾಗಿ ನಿಲ್ಲುತ್ತದೆ. ವಿಜಯಪುರದ ಶ್ರೀ ಸಿದ್ಧೇಶ್ವರ ದನಗಳ ಜಾತ್ರೆಗೆ ಕಳೆದ ವರ್ಷ ಸುಮಾರು 75 ಸಾವಿರ ದನಕರುಗಳು ಆಗಮಿಸಿದ್ದವು, ಆದರೆ ಈ ವರ್ಷ ಕೇವಲ 4 ಸಾವಿರ ದನಕರುಗಳು ಜಾತ್ರೆಗೆ ಆಗಮಿಸಿರುವುದು ಆತಂಕಕಾರಿ ಸಂಗತಿಯಾಗಿದೆ.

 

ರೈತ ಸಮುದಾಯದ ನಿಜವಾದ ಆಸ್ತಿ ಜಮೀನು ಅಲ್ಲ, ಜಮೀನಿನ ಫಲವತ್ತತೆಯನ್ನು ಸದಾ ಕಾಪಾಡುತ್ತಾ ಬಂದ ನಂದಿ ಸಂತತಿಯಾಗಿದೆ. ನಂದಿ ಸಂತತಿ‌ ನಾಶವಾಗಿರುವುದರಿಂದ ಈಗಾಗಲೇ ಕರ್ನಾಟಕ ರಾಜ್ಯದ 60 ಪ್ರತಿಶತ ರೈತರ ಜಮೀನು ಫಲವತ್ತತೆ ಕಳೆದುಕೊಂಡಿದೆ. ರೈತ ಸಮುದಾಯದ ಆಸ್ತಿಯಾದ ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾಗುತ್ತಿರುವುದು ಮುಂದಿನ ಕರಾಳ ದಿನಗಳ ಮುನ್ಸೂಚನೆಯಾಗಿದೆ. ನಂದಿ ಸಂಪತ್ತು ನಾಶವಾದಂತೆ ಮಣ್ಣು, ನೀರು, ಅನ್ನ ಸಂಪತ್ತು, ಸಂಸ್ಕೃತಿ ಹಾಗೂ ಧರ್ಮ ನಾಶವಾಗುತ್ತಿದೆ. ಅದಕ್ಕಾಗಿ, ಇಂದು ನಂದಿ ಸಂಪತ್ತನ್ನು ಉಳಿಸಿ ಬೆಳೆಸುವುದಕ್ಕೆ ಪೂರಕ‌ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವುದಕ್ಕಿಂತ ಶ್ರೇಷ್ಠ ಕಾರ್ಯ ಭೂಮಿಯ ಮೇಲೆ ಇನ್ನೊಂದಿಲ್ಲ. ಈ ಸತ್ಯವನ್ನು ಅರಿತು ಯಾವ ನಾಯಕರು ರಾಜ್ಯದ ಎಲ್ಲ ಜೋಡೆತ್ತಿನ ಕೃಷಿಕರನ್ನು ಸಂಘಟಿಸಿ, ಅವರಿಗೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವರೋ ಅವರಿಗೆ ಖಂಡಿತ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ವೈಜ್ಞಾನಿಕ‌ ನೆಲೆಗಟ್ಟಿನ ಮೇಲೆ ಹೇಳಬಹುದು.

ಜೋಡೆತ್ತಿನ ರೈತರ ಶ್ರಮ‌ ಹಾಗೂ ಕಾರ್ಯಕ್ಷಮತೆಯನ್ನು ಪರಿಗಣಿಸದೆ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಜೋಡೆತ್ತಿನ ಕೃಷಿ ತ್ಯಜಿಸುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ನೇರವಾಗಿ ಕಾರಣವಾಗುತ್ತಿದೆ. ಕೇವಲ ಒಂದು ವರ್ಷದ ಅಂತರದಲ್ಲಿ ವಿಜಯಪುರದ ಶ್ರೀ ಸಿದ್ಧೇಶ್ವರ ಜಾತ್ರೆಗೆ 94 ಪ್ರತಿಶತ ದನಕರುಗಳು ಕಡಿಮೆ ಬಂದಿರುವುದು ವಾಸ್ತವಿಕ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.‌ ಶ್ರೀ ಸಿದ್ಧೇಶ್ವರ ಜಾತ್ರೆಯು ಶ್ರೀ ಬಸನಗೌಡ ಪಾಟೀಲ (ಯತ್ನಾಳ) ಅವರ ನೇತೃತ್ವದಲ್ಲಿ ಜರಗುತ್ತಾ ಬಂದ ಕಾರಣ, ಜಾತ್ರೆಗೆ ದನಕರುಗಳು ಏಕೆ ಕಡಿಮೆ ಬಂದವು ಎಂಬುದರ ಕುರಿತು ಸೂಕ್ತ ಅಧ್ಯಯನಕ್ಕೆ ಅವರು ಆಗ್ರಹಿಸಬೇಕಾದ ಅವಶ್ಯಕತೆ ಬಂದೊದಗಿದೆ. ಈ ಮೂಲಕ ರಾಜ್ಯದ ರೈತರ ಆಸ್ತಿಯಾದ ನಂದಿ ಸಂಪತ್ತನ್ನು ಉಳಿಸಲು ಮುಂದಾಗಿ ರಾಜ್ಯದ ರೈತರ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಈ ಕೆಲಸವನ್ನು ಕೆಗೆತ್ತಿಕೊಂಡರೆ ಖಂಡಿತ ಶ್ರೀ ಸಿದ್ಧರಾಮೇಶ್ವರ ಹಾಗೂ ಶ್ರೀಶೈಲ‌ಮಲ್ಲಯ್ಯನ ಕೃಪೆ ಅವರ ಮೇಲೆ ಇರುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಮಲ್ಲಯ್ಯನ ವಾಹನ ನಂದಿಯನ್ನು ಉಳಿಸಲು ಶ್ರೀ ಸಿದ್ಧರಾಮೇಶ್ವರರು ಯಾವುದೋ ರೂಪದಲ್ಲಿ ಹಾತೊರೆಯುತ್ತಿದ್ದಾರೆ. ಅದೇ ರೀತಿ ಶ್ರೀಶೈಲ ಮಲ್ಲಯ್ಯನು ತನ್ನ ಪರಮ ಶಿಷ್ಯನಾದ ಶ್ರೀ ಸಿದ್ಧೇಶ್ವರರ ದನಗಳ ಜಾತ್ರೆಯ ವೈಭವ ನಾಶವಾಗದಂತೆ ತಡೆಯಲು ಹಾತೊರೆಯುತ್ತಿದ್ದಾನೆ.

ಯುಗಾದಿ ಪಾಡ್ಯದ ದಿನದಂದು ಶ್ರೀಶೈಲದಲ್ಲಿ ಎಳೆಯುವ ಮಲ್ಲಯ್ಯನ ತೇರಿನ ಮೇಲಿರುವ ನಂದಿ ಧ್ವಜವು ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿರುವ ಎಲ್ಲ ಗ್ರಾಮಗಳ ನಂದಿ ಕೃಷಿಕರ ಭಾವೈಕ್ಯದ ಸಂಕೇತವಾಗಿದೆ. ಕಂಬಿ ಮಲ್ಲಯ್ಯನ ಪೂಜಾ ಸಂಪ್ರದಾಯವು ಆಯಾ ಗ್ರಾಮದ ನಂದಿ ಕೃಷಿಕರ ಭಾವೈಕ್ಯದ ಸಂಕೇತವಾಗಿದೆ. ಶ್ರೀಶೈಲ‌ ಮಲ್ಲಯ್ಯನು ಕಂಬಿ ಮಲ್ಲಯ್ಯನ ರೂಪದಲ್ಲಿ ಗ್ರಾಮಗಳಿಗೆ ಆಗಮಿಸಿ ನಂದಿ ಸಂಪತ್ತು ಉಳಿಸಲು ಮುಂದಾಗುತ್ತಿದ್ದಾನೆ. ಈ ಸಂದರ್ಭದಲ್ಲಿ, ಯಾರು ನಂದಿ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವರೋ ಅವರು ಶ್ರೀಶೈಲ ಮಲ್ಲಯ್ಯನ ಕೆಲಸವನ್ನೇ ಕೈಗೆತ್ತಿಕೊಂಡಂತೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆಧುನಿಕ ಜಗತ್ತು ಕಂಡ ಮಹಾನ್ ರೈತರ ಗುರು ಹಾಗೂ ಜ್ಞಾನಯೋಗಿಗಳಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ *ನಂದಿ ಕೂಗು* ಅಭಿಯಾನವು ಕೃಷಿ ಪದವೀಧರರಿಂದ ಪ್ರಾರಂಭವಾಗಿದೆ. ನಂದಿ ಕೃಷಿಕರ ಕುರಿತು ವೈಜ್ಞಾನಿಕ ವಿಚಾರಗಳನ್ನು ಮುನ್ನೆಲೆಗೆ ತಂದು ರಾಜ್ಯದಲ್ಲಿ ನಂದಿ ಸಂಪತ್ತು ಹೆಚ್ಚಿಸುವುದಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರುವುದು ‘ನಂದಿ‌ ಕೂಗು’ ಅಭಿಯಾನದ ಮೂಲ ಉದ್ದೇಶವಾಗಿದೆ. ಶ್ರೀ ಬಸನಗೌಡ ಪಾಟೀಲ (ಯತ್ನಾಳ) ಅವರು ನಂದಿ ಕೃಷಿಕರಿಗೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಮುಂದಾದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕೃಪೆಯೂ ಕೂಡ ಅವರ ಮೇಲೆ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಇತರ ರಾಜಕೀಯ ನಾಯಕರೂ ಕೂಡ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ಮುಂದೆ ಹೆಜ್ಜೆ ಇಡುವುದು ಅವರವರ ಭವಿಷ್ಯದ ದೃಷ್ಟಿಕೋನದಿಂದ ಬಹಳ ಒಳಿತು.

ಈ ಕೆಳಗಿನ ಲಿಂಕ್ ಮೂಲಕ *’ನಂದಿ ಕೂಗು’* ಪುಸ್ತಕವನ್ನು ಪಡೆದು ನಂದಿ ಕೂಗು ಅಭಿಯಾನದ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು.

 

ಬಸವರಾಜ ಬಿರಾದಾರ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";