ವಿಜಯಪುರ: ಬರದ ನಾಡು, ಬಿಸಿಲೂರು ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ, ನಿಂಬೆಗೆ ಹೆಸರುವಾಸಿಯಾಗಿದೆ. ಸದ್ಯ ಈ ಸಾಲಿಗೆ ರೇಷ್ಮೆ ಗೂಡು ಉತ್ಪಾದನೆಗೆ ಜೀವ ಕಳೆ ಬಂದಿದೆ.
ರೇಷ್ಮೆ ಕೃಷಿಯಲ್ಲಿ ತಿಂಗಳಿಗೆ ಲಕ್ಷ ರೂಪಾಯಿ ಸಂಪಾದಿಸಿ ವರ್ಷಕ್ಕೆ 12 ಲಕ್ಷವನ್ನು ರೈತನೋರ್ವ ಸಂಪಾದಿಸುತ್ತಿದ್ದಾರೆ. ಗುಂಡಪ್ಪ ಗುಡಲಮನಿ ಮೂಲತಃ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು.
ಕಳೆದ 20 ವರ್ಷಗಳಿಂದ ಹಿಪ್ಪು ನೇರಳೆ ಬೆಳೆಯನ್ನು ಹೇರಳವಾಗಿ ಬೆಳೆದು, ಡಬ್ಬಲ್ ಹೈಬ್ರಿಡ್ ಬಿಳಿ ರೇಷ್ಮೆ ಗೂಡು ಉತ್ಪಾದಿಸಿ, ಅಧಿಕ ಲಾಭ ಪಡೆಯುತ್ತಿದ್ದಾರೆ. 3 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ತೋಡಿಸಿ, ಹನಿ ನೀರಾವರಿ ಪದ್ಧಿತಿ ಮೂಲಕ ಹಿಪ್ಪು ನೇರಳೆಯನ್ನು ಬೆಳೆದು ಬಿಳಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಮನಗೂಳಿಯ ಗುಡಲಮನಿ ರೇಷ್ಮೆ ಗೂಡು ತಯಾರಿಸುವ ಬೆಚ್ಚಿನಗಿನ ಮನೆ ನಿರ್ಮಿಸಿದ್ದಾರೆ. ಅದರಲ್ಲಿ ರೇಷ್ಮೆ ಹುಳುವನ್ನು ಶಾಸ್ತಿಯ ಪದ್ಧಿ ಮೂಲಕ ಬೆಳೆಸಿ, ಚಂದ್ರಿಕೆಯಲ್ಲಿ ರೇಷ್ಮೆ ಗೂಡು ನಿರ್ಮಾಣಗೊಳ್ಳುವಂತೆ ಮಾಡುವ ಕೃಷಿ ಪದ್ಧತಿಯನ್ನು ಕರಗತ ಮಾಡಿಕೊಂಡಿದ್ದಾರೆ.
100 ರೇಷ್ಮೆ ಮೊಟ್ಟೆಗೆ 1000 ಗಳಂತೆ ಖರೀದಿಸಿ ತಂದು, ರೇಷ್ಮೆ ಹುಳು ಗೂಡು ಕಟ್ಟುವಂತೆ ಬೆಳೆಸಿ ಕೆಜಿ ರೇಷ್ಮೆಗೆ 500 ಗಳಂತೆ ಮಾರಾಟ ಮಾಡಲಾಗುತ್ತದೆ. ರೇಷ್ಮೆ ಹುಳುವಿಗೆ ಪ್ರಾಥಮಿಕ ಹಂತದಲ್ಲಿ ಹಿಪ್ಪು ನೇರಳೆ ಸೊಪ್ಪನ್ನು ಈರುಳ್ಳಿಯಂತೆ ಕತ್ತರಿಸಿ ಹಾಕಲಾಗುತ್ತದೆ. ಬಳಿಕ ಎರಡನೇ ಹಂತದಲ್ಲಿ ಹಿಪ್ಪು ನೇರಳೆ ಗಿಡದ ರೆಂಬೆ ಕತ್ತರಿಸಿದ ಸೊಪ್ಪನ್ನು ಹಾಕಲಾಗುತ್ತದೆ. ರೇಷ್ಮೆ ಹುಳುಗಳು ಹಿಪ್ಪು ನೇರಳೆ ಸೊಪ್ಪನ್ನು ತಿಂದು, 28 ದಿನಗಳಲ್ಲಿ ಗೂಡು ತಯಾರಿ ಮಾಡುತ್ತವೆ ಎಂದು ರೈತ ಮಾಹಿತಿ ನೀಡಿದ್ದಾರೆ.