ವಿಜಯಪುರ: ಕಳೆದ ಮಾರ್ಚ್-ಏಪ್ರಿಲ್-2023ರ ತಿಂಗಳಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಶೇ.91.23 ರಷ್ಟು ಪ್ರಗತಿ ಸಾಧಿಸುವುದರ ಮೂಲಕ ರಾಜ್ಯಕ್ಕೆ ವಿಜಯಪುರ ಜಿಲ್ಲೆ 11ನೇ ಸ್ಥಾನ ಪಡೆದಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಉಮೇಶ ಶಿರಹಟ್ಟಿಮಠ ಅವರು ತಿಳಿಸಿದ್ದಾರೆ. ಈ ಬಾರಿ ರಾಜ್ಯಕ್ಕೆ ಪ್ರಥಮ 625 ಕ್ಕೆ 625 ಅಂಕ ಪಡೆದ 4 ವಿದ್ಯಾರ್ಥಿಗಳ ಪೈಕಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರ ಭೀಮನಗೌಡ ಹನಮಗೌಡ ಬಿರಾದಾರ ಪಾಟೀಲ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಅದೇ ಶಾಲೆಯ ಕುಮಾರಿ ಅನುಶ್ರೀ ಉಕ್ಕಲಿ ಮತ್ತು ಮುದ್ದೇಬಿಹಾಳ ತಾಲೂಕಿನ ಮೈಲೇಶ್ವರದ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕುಮಾರ ಶ್ರೇಯಸ್ ರಮೇಶ ಮದ್ದರಕಿ 624 ಅಂಕ ಪಡೆದು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವಿಜಯಪುರ ಜಿಲ್ಲೆ ಬೆಳಗಾವಿ ವಿಭಾಗದ 9 ಜಿಲ್ಲೆಗಳ ಪೈಕಿ ಪ್ರಥಮ ಪಡೆದಿದೆ ಎಂದು ಅವರು ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 40,446 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 36,898 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಿಶನ್ ವಿದ್ಯಾಪೂರ ಚೇತನಾ ಸಂಜೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ ನಿಲಯಗಳಲ್ಲಿ ಓದುವ ಮಕ್ಕಳಿಗೆ ಆನ್ಲೈನ್ ಬೋಧನೆ ಆಯೋಜಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತಮ ಫಲಿತಾಂಶಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ, ಜಿಲ್ಲಾ ಹಂತದಲ್ಲಿ ಫೋನ್-ಇನ್ ಕಾರ್ಯಕ್ರಮ, ಮುಖ್ಯೋಪಾಧ್ಯಾಯರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾರ್ಗದರ್ಶನ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರವೀಶ ಕುಮಾರ ಅವರ ವಿಶೇಷ ಮಾರ್ಗದರ್ಶನ, ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಫಲಿತಾಂಶ ಹೆಚ್ಚಿಸಲು ವಿಷಯ ಕಾರ್ಯಾಗಾರ ಆಯೋಜನೆ, ಸಂಪ್ರತಿ ಮತ್ತು ಸನ್ಮತಿ ಪಾಸಿಂಗ್ ಪ್ಯಾಕೇಜ್ ಮತ್ತು ಸ್ಕೋರಿಂಗ್ ಪ್ಯಾಕೇಜ್ ನಿಡುವುದು, ಶಾಲಾ ಅವಧಿಯ ಮುನ್ನ ಹಾಗೂ ನಂತರ ವಿಶೇಷ ತರಗತಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.