ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 13 ಮತ್ತು 14ನೇ ವಾರ್ಷಿಕ ಘಟಿಕೋತ್ಸವ ಡಿಸೆಂಬರ್.19ರಂದು ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೋ.ಬಿ.ಕೆ.ತುಳಸಿಮಾಲ ತಿಳಿಸಿದರು.
ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 12 ಗಂಟೆಗೆ ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸೇರಿದಂತೆ ಗಣ್ಯರು ಭಾಗವಹಿಸುತ್ತಾರೆ. ಅಲ್ಲದೇ, ರಾಜ್ಯಪಾಲರು ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು ಎಂದರು. ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 81 ವಿದ್ಯಾರ್ಥಿನಿಯರು 13ನೆಯ ಮತ್ತು 37 ವಿದ್ಯಾರ್ಥಿನಿಯರು 14ನೆಯ ಘಟಿಕೋತ್ಸವದ ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.