ವಿಜಯಪುರ: ಎಮ್ಮೆಗೆ ನೀರು ಉಣ್ಣಿಸಲು ಹೋದಾಗ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದ ಬಾಲಕಿ ರಕ್ಷಿಸಲು ಹೋಗಿ ಆಕೆಯೂ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಲಗೇರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹಡಲಗೇರಿಯ ನೀಲಮ್ಮ ಹುಲಗಪ್ಪ ಕಿಲಾರಹಿಟ್ಟಿ (16), ಲಡ್ಡುಮುತ್ಯಾ ಮಹಾನಿಂಗಪ್ಪ ಕಿಲಾರಹಟ್ಟಿ (25) ಮತ್ತು ಯಲ್ಲಪ್ಪ ಶಿವಪ್ಪ ಯಾಳವಾರ (30) ಮೃತಪಟ್ಟಿರುವ ದುರ್ದೈವಿಗಳು. ಎಂದಿನಂತೆ ನೀಲಮ್ಮ ಎಮ್ಮೆಗಳನ್ನು ಹೊಡೆದುಕೊಂಡು ನೀರು ಕುಡಿಸಲೆಂದು ಹೊಂಡಕ್ಕೆ ತೆರಳಿದ್ದಳು. ಆಗ ಏಕಾಏಕಿ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾಳೆ. ಈ ವೇಳೆ ಲಡ್ಡುಮುತ್ಯಾ ಮತ್ತು ಯಲ್ಲಪ್ಪ ಇಬ್ಬರೂ ಆಕೆಯನ್ನು ರಕ್ಷಿಸಲು ಹೊಂಡಕ್ಕೆ ಧುಮುಕಿದ್ದಾರೆ. ಆದರೆ ಮೇಲೆ ಬರಲಾಗದೆ ಹೊಂಡದಲ್ಲೇ ಮುಳುಗಿ ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.