ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆ ಕಿಲ್ಲರ್ ಬೈಪಾಸ್ ಎಂದೇ ಹೆಸರು ಪಡೆದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಒಂದಿಲ್ಲೊಂದು ಅಪಘಾತ ನಡೆದು ವಾಹನ ಸವಾರರು ಸಾವನ್ನಪ್ಪುತ್ತಲೇ ಇರುತ್ತಾರೆ. ಇದೀಗ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಭೀಮರಾವ್ ಗೋಸಾವಿ (38) ಹಾಗೂ ಏಕನಾಥ ಗೋಸಾವಿ (40) ಎಂಬುವವರೇ ಸಾವನ್ನಪ್ಪಿದವರು. ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರು ಧಾರವಾಡ ಲಕ್ಷ್ಮೀಸಿಂಗನಕೇರಿ ನಿವಾಸಿಗಳು ಎಂದು ಗೊತ್ತಾಗಿದೆ. ಇವರು ಸ್ಟೋವ್ ರಿಪೇರಿ ಮಾಡುವ ಕಾರ್ಮಿಕರಾಗಿದ್ದು, ಬೆಳಿಗ್ಗೆ ಕೆಲಸದ ನಿಮಿತ್ತ ಹೋಗುವಾಗ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.