ವಿಜಯಪುರ: ಜನರಿಗೆ ಸ್ಪಂದಿಸುವ ವ್ಯಕ್ತಿಗೆ ಮತ ಹಾಕಬೇಕು. ಶಾಸಕನಾಗಿ ಆಯ್ಕೆಯಾಗಿ ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ವಿಜಯಪುರ ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ವ್ಯಕ್ತಿಗೆ, ನಾಡಿನ ಕಾಳಜಿ ಇರುವ ವ್ಯಕ್ತಿಗೆ ಮತ ಹಾಕಬೇಕು. ರಾಜಕಾರಣಿಗಳು ನೀಡುವ ಕಾಣಿಕೆಯ ಮೇಲೆ ಜನರು ಜೀವನ ಮಾಡುತ್ತಾರಾ ಎಂದು ಪ್ರಶ್ನಿಸಿದ ಹೊರಟ್ಟಿ, ಗಿಫ್ಟ್ ಹಂಚಿಕೆ ಘಟನೆಗಳು ಆಗಬಾರದು. ಹಣ ಹಾಗೂ ಇತರೆ ಕಾಣಿಕೆ ನೀಡಿ ಆಯ್ಕೆಯಾದವ ಏನು ಆಗುತ್ತಾನೆ? ಹಣ ಕೊಟ್ಟು ಆಯ್ಕೆಯಾದ ಬಳಿಕ ನೀವು ಪುಗಸಟ್ಟೆ ಮತ ಹಾಕಿಲ್ಲ ಎಂದು ಮತದಾರರಿಗೆ ಹೇಳುತ್ತಾನೆ. ಅದಕ್ಕಾಗಿ ಮತದಾರರು ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆಯಾಗುತ್ತದೆ ಎಂದರು.