ವಿಜಯಪುರ: ಮುಂಗಾರು ಹಂಗಾಮಿಗೆ 14 ದಿನ ಚಾಲು ಹಾಗೂ 10 ದಿನ ಬಂದ ಪದ್ಧತಿ ಅನುಸಾರವಾಗಿ ನೀರು ಹರಿಸಲು 2023-24ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ವಿಜಯಪುರದ ಆಲಮಟ್ಟಿಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ ಒಳಹರಿವು ಕ್ಷೀಣವಾಗಿದ್ದು ಹಾಗೂ ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಒಳಹರಿವು ಸಂಪೂರ್ಣ ಸ್ಥಗಿತವಾಗುವ ಮುನ್ಸೂಚನೆ ಇರುವುದರಿಂದ ಆ.23ರಿಂದ 10 ದಿನಗಳ ಬಂದ್ ಪದ್ಧತಿಯನ್ನು ಅನುಸರಿಸುವುದು. ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳಹರಿವನ್ನು ಆಧರಿಸಿ ಪುನ: ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ದಿನಾಂಕ : 27-07-2023ರಿಂದ ಇಲ್ಲಿಯವರೆಗೆ ಕಾಲುವೆ ಜಾಲಕ್ಕೆ ಸತತವಾಗಿ 14.48 ಟಿಎಂಸಿ ನೀರು ಹರಿಸಲಾಗಿದ್ದು, ಮುಂಗಾರು ಹಂಗಾಮಿಗೆ ನೀರು ಪೂರೈಸಬೇಕಾದಲ್ಲಿ 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸಿ ನೀರು ಬಿಡುಗಡೆ ಮಾಡುವುದು. ನೀರಾವರಿಗಾಗಿ 70 ದಿನಗಳು ನೀರು ಹರಿಸುವುದು ಹಾಗೂ 37 ದಿನಗಳು ಬಂದ ಮಾಡಲು ನಿರ್ಧರಿಸಲಾಯಿತು.
ಕಾಲುವೆಗೆ ನೀರು ಬಿಡುವ ದಿನಾಂಕಗಳು : ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರದಂತೆ ಆಗಸ್ಟ್ 8 ರಿಂದ 22ರವರೆಗೆ 14 ದಿನಗಳು, ಆಗಸ್ಟ್ 30ರಿಂದ ಸೆಪ್ಟಂಬರ್ 12ರವರೆಗೆ 14 ದಿನಗಳು, ಸೆಪ್ಟಂಬರ್ 23 ರಿಂದ ಅಕ್ಟೋಬರ್ 6 ರವರೆಗೆ 14 ದಿನಗಳು, ಅಕ್ಟೋಬರ್ 17 ರಿಂದ ಅಕ್ಟೋಬರ್ 30ರವರೆಗೆ 14 ದಿನಗಳು ಹಾಗೂ ನವೆಂಬರ್ 10 ರಿಂದ ನವೆಂಬರ್ 23ರವರೆಗೆ 14 ದಿನಗಳು ಸೇರಿದಂತೆ ಒಟ್ಟು 70 ದಿನಗಳ ಕಾಲ ನೀರು ಬಿಡುಗಡೆಗೊಳಿಸಲು ನಿರ್ಧರಿಸಲಾಯಿತು.
ಅದರಂತೆ ಆಗಸ್ಟ್ 23 ರಿಂದ 29ರವರೆಗೆ 07 ದಿನಗಳು, ಸೆಪ್ಟಂಬರ್ 13 ರಿಂದ 22 ರವರೆಗೆ 10 ದಿನಗಳು, ಅಕ್ಟೋಬರ್ 7 ರಿಂದ 16ರವರೆಗೆ 10 ದಿನಗಳು ಹಾಗೂ ಅಕ್ಟೋಬರ್ 31 ರಿಂದ ನವೆಂಬರ್ 9ರವರೆಗೆ 10 ದಿನಗಳು ಸೇರಿದಂತೆ 37 ದಿನಗಳು ಬಂದ್ ಪದ್ಧತಿ ಅನುಸರಿಸಲು ನಿರ್ಧರಿಸಲಾಯಿತು. ಆಲಮಟ್ಟಿಗೆ ಒಳಹರಿವು ದಿನಾಂಕ : 12-07-2023ರಂದು ಪ್ರಾರಂಭವಾಗಿದ್ದು, ಮೇಲ್ಭಾಗದ ಒಳಹರಿವನ್ನು ಆಧರಿಸಿದ ಹೊರಹರಿವನ್ನು ನಿಯಂತ್ರಿ ಆಲಮಟ್ಟಿ ಜಲಾಶಯದಲ್ಲಿ ಇಂದಿನವರೆಗೆ ಜಲಾಶಯದ ಮಟ್ಟವನ್ನು ಪೂರ್ಣಮಟ್ಟ 519.60ಮೀ. ಗೆ ಕಾಯ್ದುಕೊಳ್ಳಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಮಳೆ ಇತ್ತೀಚೆಗೆ ವಾರದಿಂದ ಕ್ಷೀಣವಾಗಿದ್ದು, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಅವಶ್ಯವಿರುವ 67 ಟಿಎಂಸಿ ನೀರು ಸಂಗ್ರಹವಿದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಜುಲೈ ತಿಂಗಳಲಿನಲ್ಲಿ ವಾಡಿಕೆ ಮಳೆ ಬಾರದೇ ಇರುವುದರಿಂದ ಕುಂಠಿತವಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಒಟ್ಟು 6.67 ಲಕ್ಷ್ ಹೆಕ್ಟೇರ್ ಕ್ಷೇತ್ರ ನೀರಾವರಿ ಒಳಪಡಲು ಅಧಿಸೂಚಿಸಿದೆ. ಮುಂಗಾರು ಹಂಗಾಮು ಮಳೆ ಆಧಾರಿತವಾಗಿದ್ದು, ರೈತರು ತಮ್ಮ ಕ್ಷೇತ್ರದಲ್ಲಿ ದ್ವಿಋತು ಬೆಳೆಗಳನ್ನು ಮಾತ್ರ ಬೆಳೆಯಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದಾಗ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ಆಲಮಟ್ಟಿ ಜಲಾಶಯಕ್ಕೆ ಪೂರ್ಣ ಮಟ್ಟ 519.60ಮೀ. ತಲುಪಿದ ನಂತರ ಒಳಹರಿಸು ಇರುವರೆಗೆ ಮುಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ಸತತವಾಗಿ ನೀರು ಪೂರೈಸಲಾಗುವುದು. ಒಳಹರಿವು ಸ್ಥಗಿತವಾದರೆ ಈ ಹಿಂದೆ ಅನುಸರಿಸಿ ಯಶಸ್ವಿಯಾದ 14 ಚಾಲೂ ಹಾಗೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸಲಾಗುವುದು. ಮುಂಗಾರು ಹಂಗಾಮಿಗೆ ಒಟ್ಟಾರೆ ಕ್ಷೇತ್ರದ ಪ್ರತಿಶತ 80 ರಷ್ಟು ಕ್ಷೇತ್ರಕ್ಕೆ ಅಂದರೆ 5.34 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವಿರ ಸೌಲಭ್ಯ ಕಲ್ಪಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೇಲಾಗದಂತೆ ಮಿತವಾಗಿ ಬಳಸುವುದರ ಮೂಲಕ ಕೃಷ್ಣ ಭಾಗ್ಯ ಜಲನಿಗಮದೊಂದಿಗೆ ಸಹಕರಿಸಲು ಸಭೆಯಲ್ಲಿ ವಿನಂತಿಸಲಾಯಿತು. ನವೆಂಬರ್-2023ರಲ್ಲಿ ಎರಡೂ ಜಲಾಶಯಗಳ ಸಂಗ್ರಹಣೆಯನ್ನು ಗಮನದಲ್ಲಿರಿಸಿಕೊಂಡು 2023-24ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ನವೆಂಬರ್-2023ರ ಅಂತ್ಯದಲ್ಲಿ ಜರುಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ, ಶಾಸಕರುಗಳಾದ ಎಚ್.ವೈ.ಮೇಟಿ, ಸಿ.ಎಸ್.ನಾಡಗೌಡ ಅಪ್ಪಾಜಿ, ಜೆ.ಟಿ.ಪಾಟೀಲ, ಪಿ.ಎಚ್.ಪೂಜಾರ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ರಾಜಾವೆಂಕಟಪ್ಪ ನಾಯಕ, ಶ್ರೀಮತಿ ಕರೆಮ್ಮ ನಾಯಕ, ಬಸನಗೌಡ ದದ್ದಲ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ, ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಆಲಮಟ್ಟಿ ಡ್ಯಾಂ ವಲಯದ ಮುಖ್ಯ ಅಭಿಯಂತರ ಎಚ್.ಎನ್.ಶ್ರೀನಿವಾಸ, ಅಧೀಕ್ಷಕ ಅಭಿಯಂತರ ಬಸವರಾಜ, ಭೀಮರಾಯನಗುಡಿ ಮುಖ್ಯ ಅಭಿಯಂತರ ಪ್ರೇಮಸಿಂಗ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.