ವಿಜಯಪುರ: ಉದ್ಯೋಗದಾತರು ವಿಜಯಪುರ ಜಿಲ್ಲೆಯ ಹೆಚ್ಚಿನ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯದ ಆಧಾರದ ಮೇಲೆ ಉದ್ಯೋಗ ಕಲ್ಪಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮನವಿ ಮಾಡಿದರು.
ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿಂದು ಉದ್ಯೋಗಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳದಲ್ಲಿ 4100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಂಡಿದ್ದು, 50 ಕ್ಕೂ ಹೆಚ್ಚು ಉದ್ಯೋಗ ನೀಡುವ ಕಂಪನಿಗಳು ಭಾಗವಹಿಸಿರುವುದು ಅತ್ಯಂತ ಸಂತಸದ ವಿಷಯವಾಗಿದ್ದು, ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಇಂತಹ ಉದ್ಯೋಗ ಮೇಳಗಳು ಹೆಚ್ಚಿನ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಇಲ್ಲಿ ಭಾಗವಹಿಸಿರುವಂತಹ ಹೆಚ್ಚು ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ ನೆರವಾಗುವಂತೆ ಉದ್ಯೋಗದಾತರಿಗೆ ಕರೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಿರುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಅವರ ಕೌಶಲ್ಯ ಆಧಾರದ ಮೇಲೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಬೇಕು. ಕೋವಿಡ್ ಕಾರಣದಿಂದ ಮೂರು ಹಂತಗಳಲ್ಲಿ ಸಣ್ಣ ಮಟ್ಟದಲ್ಲಿ ಈ ಉದ್ಯೋಗಮೇಳ ಹಮ್ಮಿಕೊಳ್ಳಬೇಕೆಂಬ ಕಾನೂನಿನ ಅಡಿ ಅವಕಾಶವಿದ್ದರೂ ಕೂಡ ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಿಸಲು ಈ ಬೃಹತ್ ಉದ್ಯೋಗಮೇಳ ಇಂದು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ದೊರಕಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿದ್ದಲ್ಲಿ ಇದರ ಸಾರ್ಥಕತೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಈ ಉದ್ಯೋಗಮೇಳದಲ್ಲಿ ಅಭ್ಯರ್ಥಿಗಳ ಆಯ್ಕೆ ನಂತರ ವಿವಿಧ ಕಂಪನಿಗಳಲ್ಲಿ ನೇಮಕಾತಿ ಮತ್ತು ಕಾಯ್ದಿರಿಸಿದ ಪಟ್ಟಿ ಬಗ್ಗೆ ಅಧಿಕೃತ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅದರಂತೆ ನೇಮಕಗೊಂಡ ನಂತರ ಉದ್ಯೋಗದಲ್ಲಿ ಅಭ್ಯರ್ಥಿಗಳು ಮುಂದುವರೆದಿರುವ ಬಗ್ಗೆಯೂ ನಿರಂತರ ನಿಗಾ ಇಡುವಂತೆ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು ಅಭ್ಯರ್ಥಿಗಳ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡುವುದರಿಂದ ಅಭ್ಯರ್ಥಿಗಳು ಕೂಡ ಆತ್ಮವಿಶ್ವಾಸ ಕಳೆದುಕೊಳ್ಳದೇ ಹಾಗೂ ನಿರಾಶರಾಗದೇ ನಿರಂತರ ಪರಿಶ್ರಮದ ಮೂಲಕ ಉದ್ಯೋಗ ಪಡೆಯುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ಜಿಲ್ಲೆಯ ಇಂಡಿ, ಬಬಲೇಶ್ವರ, ನಾಲತವಾಡ ಸೇರಿದಂತೆ ಆರು ಸ್ಥಳಗಳಲ್ಲಿ ಜಿಲ್ಲಾಡಳಿತ ಮತ್ತು ಟಾಟಾ ಟೆಕ್ನಾಲಜಿಸ್ ಸಹಯೋಗದೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ಆರಂಭಿಸಿದ ಹೆಗ್ಗಳಿಕೆ ವಿಜಯಪುರ ಜಿಲ್ಲೆಗೆ ಸಂದಿದೆ. ಮಾಸ್ಟರ್ ಟ್ರೇನರ್ಗಳನ್ನು ಮತ್ತು ಸರ್ವ ರೀತಿಯಲ್ಲಿ ಸನ್ನದ್ಧಗೊಂಡಿದ್ದು, ಹಲವು ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇಂಡಸ್ಟ್ರೀಯಲ್ ರೋಬೋಟಿಕ್ ಟೆಕ್ನಾಲಜಿ, ಅಡ್ವಾನ್ಸಡ್ ಮ್ಯಾನ್ಯುಫ್ಯಾಕ್ಚರಿಂಗ್ ಅಟೋಮೇಶನ್, ವಿದ್ಯುತ್ ಚಾಲಿತ ವಾಹನ ಮಶೀನ್ಗಳ ಕುರಿತು ಸಹ ತರಬೇತಿ ನೀಡಲಾಗುತ್ತಿದ್ದು, ಇಂತಹ ತರಬೇತಿ ಪಡೆದಲ್ಲಿ, ದೇಶ ವಿದೇಶಗಳಲ್ಲಿ ಉದ್ಯೋಗ ಅವಕಾಶ ಪಡೆಯಲು ಸಹ ಸಾಧ್ಯವಾಗಲಿದ್ದು, ಅಭ್ಯರ್ಥಿಗಳು ಇದರ ಸದುಪಯೋಗಪಡೆಯುವಂತೆ ಸಲಹೆ ನೀಡಿದರು.
ದೇಶದಲ್ಲಿ ಕರ್ನಾಟಕ ಸರ್ಕಾರ ಮಾತ್ರ ವಿದ್ಯಾರ್ಥಿಗಳಿಗೆ ಇಂತಹ ವಿಶೇಷ ಅವಕಾಶವನ್ನು ಕಲ್ಪಿಸಿದ್ದು, ಒಳ್ಳೆಯ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಅದರಂತೆ ರಿಕಗ್ನೀಶನ್ ಆಫ್ ಪ್ರಾಯರ್ ಲರ್ನಿಂಗ್ದವರಿಗೂ ಕೂಡ ಪ್ರಮಾಣ ಪತ್ರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ನಿರಾಶರಾಗದೇ, ಸಮಯ ವ್ಯರ್ಥಮಾಡದೇ ನಿರಂತರ ಪರಿಶ್ರಮ ಮತ್ತು ಪ್ರಯತ್ನದ ಮೂಲಕ ಉದ್ಯೋಗ ಪಡೆಯಬೇಕು. ಉದ್ಯೋಗ ಇಲ್ಲದಿದ್ದರೂ ಕೂಡ ಕೌಶಲ್ಯವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಸಂಬಂಧಿಸಿದ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಿ, ಕೌಶಲ್ಯ ವೃದ್ಧಿಗೆ ಪ್ರಯತ್ನಿಸಲಾಗುವುದು. ಉದ್ಯೋಗ ಪಡೆಯಲು ಕೌಶಲ್ಯತೆ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ಮನಗಾಣುವಂತೆ ತಿಳಿಸಿದ ಅವರು ಯಶಸ್ವಿಯಾಗಿ ಈ ಉದ್ಯೋಗಮೇಳ ಹಮ್ಮಿಕೊಂಡಿರುವುದಕ್ಕೆ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಅಭಿನಂದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ್ ಅವರು ಮಾತನಾಡಿ ಮಾನವೀಯತೆಯ ನೆಲೆಯ ಮೇಲೆ ಉದ್ಯೋಗದಾತರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಬೇಕು. ಪ್ರಾಮಾಣಿಕ ಉದ್ಯೋಗಾಕಾಂಕ್ಷಿಗಳು ಇಲ್ಲಿ ಲಭ್ಯವಿರುವುದರಿಂದ ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಅಭ್ಯರ್ಥಿಗಳು ಕೂಡಾ ಉದ್ಯೋಗ ಸಿಕ್ಕಿಲ್ಲವೆಂದು ಹತಾಶರಾಗದೇ ನಿರಂತರ ಪ್ರಯತ್ನದ ಮೂಲಕ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಅಶೋಕ ಅಲ್ಲಾಪೂರ ಅವರು ಮಾತನಾಡಿ ಖಾಸಗೀಕರಣ ಮತ್ತು ಉದಾರೀಕರಣದಂತಹ ಇಂದಿನ ದಿನಮಾನಗಳಲ್ಲಿ ಉದ್ಯೋಗ ಅತೀ ಮುಖ್ಯವಾಗಿದ್ದು, ಇಂದಿನ ಉದ್ಯೋಗಮೇಳವು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಇಲ್ಲಿ ಲಭಿಸಿದ್ದು, ಇದರ ಲಾಭ ಪಡೆಯಬೇಕು. ಆಯ್ಕೆಯಾಗದವರು ಹತಾಶರಾಗದೇ ಆತ್ಮವಿಶ್ವಾಸ ಕಳೆದುಕೊಳ್ಳದೇ ಇಚ್ಛಾಶಕ್ತಿಯೊಂದಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಜಿ,ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ ಸುಮಾರು 50 ಕ್ಕೂ ಹೆಚ್ಚು ಕಂಪನಿಗಳು ಹಾಗೂ 4100 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿರುವುದು ಉದ್ಯೋಗ ಮೇಳ ಯಶಸ್ವಿಯ ಪ್ರತೀಕವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ದೊರಕಿದ್ದಲ್ಲಿ ಇದರ ಸಾರ್ಥಕತೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಕೂಡ ತಮ್ಮ ಕುಟುಂಬಗಳ ಹಿತದೃಷ್ಟಿಯಿಂದ ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿ, ಯಶಸ್ವಿಗೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀಗುರುಪಾದಯ್ಯ ಹಿರೇಮಠ ಅವರು ವೃತ್ತಿಕೌಶಲ್ಯ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೈಗೊಳ್ಳಲಾದ ಕ್ರಮಗಳ ಮತ್ತು ಕೌಶಲ್ಯಾಧಾರಿತ ತರಬೇತಿ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು. ಶ್ರೀ ಇಮಾಮ್ ನದಾಫ್ ಅವರು ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಕುರಿತು ತರಬೇತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ, ಜಿ,ಪಂ ಯೋಜನಾ ನಿರ್ದೇಶಕ ನಾನಾಸಾಹೇಬ ಬಸರಿಗಿಡದ ಉಪಸ್ಥಿತರಿದ್ದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಶ್ರೀಮತಿ ಸುನಂದಾ ಬಾಳಪ್ಪನವರ ಅವರು ಸ್ವಾಗತಿಸಿದರು, ಸಹಾಯಕ ನಿರ್ದೇಶಕರಾದ ದೇವೇಂದ್ರ ಧನಪಾಲ್ ವಂದಿಸಿದರು.