ವಿಜಯಪುರ : ಕೋವಿಡ್ -19 ಕಾಲದಲ್ಲಿ ಜೀವದ ಹಂಗು ತೊರೆದು ಕೊರೋನಾ ವಾರಿಯರ್ಸ್ ಗಳಾಗಿ ಗಣನೀಯ ಸೇವೆ ಸಲ್ಲಿಸಿದ ಪೊಲೀಸ್ರ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದ್ದು, ಸೇವಾನಿರತ ಹಾಗೂ ನಿವೃತ್ತ ಪೊಲೀಸ್ರು ಮತ್ತವರ ಅವಲಂಬಿತರ ಕಲ್ಯಾಣಕ್ಕಾಗಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ಧಾರವಾಡ ಪಿ. ಟಿ. ಎಸ್ ಪ್ರಾಂಶುಪಾಲರು ಹಾಗೂ ನಿವೃತ್ತ ಪೊಲೀಸ್ ಅಧೀಕ್ಷಕರಾದ ಎನ್. ಬಿ ಜಾಧವ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ದಿನವು ಪೊಲೀಸರ ಧೈರ್ಯ, ಶೌರ್ಯ ಹಾಗೂ ಸಮರ್ಪಣಾ ಮನೋಭಾವವನ್ನು ಸ್ಮರಿಸುವ ದಿನವಾಗಿದ್ದು, ಪೊಲೀಸರು ಇನ್ನಷ್ಟು ಶ್ರದ್ಧಾ ಹಾಗೂ ನಿಷ್ಠಾಪೂರ್ವಕವಾಗಿ, ರಚನಾತ್ಮಕವಾಗಿಯೂ ಕಾರ್ಯದಲ್ಲಿ ತೊಡಗಲು ಸಂಕಲ್ಪಗೈಯ್ಯುವ ದಿನವೂ ಆಗಿದೆ ಎಂದು ತಿಳಿಸಿದರು.
ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಅದರಂತೆ ಪೊಲೀಸರ ಕಲ್ಯಾಣ ನಿಧಿಯನ್ನು ಸಂಗ್ರಹಿಸಿ, ಅದನ್ನು ಪೊಲೀಸರ ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗೆ ಬಳಸುತ್ತಿರುವುದೂ ಕೂಡ ಅತ್ಯಂತ ಶ್ಲಾಘನೀಯ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ್ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ಉತ್ಸಾಹದಿಂದ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಇದು ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಸಂಕಲ್ಪ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಸೇವೆ ಸ್ಮರಣೆಯ ದಿನವಾಗಿದೆ ಎಂದು ಹೇಳಿದರು.
ಪೊಲೀಸರು ಇನ್ನೂ ಹೆಚ್ಚಿನ ಶ್ರದ್ಧಾಪೂರ್ವಕವಾಗಿ, ನಿಷ್ಠೆಯಿಂದ ಹಾಗೂ ರಚನಾತ್ಮಕವಾಗಿ ತಮ್ಮ ಕಾರ್ಯದಲ್ಲಿ ತೊಡಗಿ, ಸಾರ್ವಜನಿಕ ಜೀವನದಲ್ಲಿ ದಕ್ಷತೆಯಿಂದ ತೊಡಗಿಸಿಕೊಳ್ಳುವಂತಾಗಲು ಎಂದ ಅವರು ಪೊಲೀಸ್ ಕಲ್ಯಾಣ ಹಾಗೂ ಜೀವನಮಟ್ಟವನ್ನು ಹೆಚ್ಚಿಸುವುದು ಬಹಳ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಕಲ್ಯಾಣಕಾರಿ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅದರಂತೆ ಪೊಲೀಸ್ ಕಲ್ಯಾಣಕ್ಕಾಗಿ ವಂತಿಕೆ ನಿಧಿ ಸಂಗ್ರಹಿಸಿ, ಅದನ್ನು ಸದ್ಭಳಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಪೊಲೀಸರ ಕಲ್ಯಾಣದ ದೃಷ್ಟಿಯಿಂದ ಈಗಾಗಲೇ ಸುವಿಧಾ ಗ್ಯಾಸ್ ಏಜೆನ್ಸಿ, ವ್ಯಾಯಾಮ ಶಾಲೆ, ಗ್ರಂಥಾಲಯ, ಬಯಲು ಚಿತ್ರಮಂದಿರ, ಟೆನ್ನಿಸ್ ಕೋರ್ಟ್ ನಂತಹ ಇನ್ನೂ ಅನೇಕ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದ್ದು, ಪೊಲೀಸ್ ಸಮುದಾಯ ಭವನ ನಿರ್ಮಾಣಕ್ಕೂ ಅಗತ್ಯ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸ್ರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾದ ಹಣವನ್ನು ಪೊಲೀಸರ ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗೂ ಬಳಸಲಾಗುತ್ತಿದೆ. ಅಲ್ಲದೇ ಪೊಲೀಸರ ಮರಣೋತ್ತರ ಧನ ಸಹಾಯ ಕೂಡ ಮಾಡಲಾಗಿದೆ. ಮುಂಬರುವ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ಪೋಲಿಸರ ಕಲ್ಯಾಣಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕ ಪಡೆದ ಜಿಲ್ಲೆಯ ಮೂವ್ವರು ಹೆಮ್ಮೆಯ ಪೊಲೀಸ್ ಅಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರಿಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ಅರಿವು ಉಂಟಾಗುತ್ತಿದ್ದು, ಪೊಲೀಸ್ರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ಹೇಳಿದರು.
ಅದರಂತೆ ಇಂತಹ ಕಾರ್ಯಕ್ರಮಗಳಲ್ಲಿ ಪೊಲೀಸರ ತ್ಯಾಗ, ಕಠಿಣ ಪರಿಶ್ರಮಗಳನ್ನು ಸ್ಮರಿಸಿ, ಶ್ಲಾಘಿಸುತ್ತಿರುವುದು ಹೆಚ್ಚು ಉಚಿತವೆನಿಸುತ್ತಿದೆ. ಸಾರ್ವಜನಿಕರಿಗೂ ಪೊಲೀಸ್ರ ಕಾರ್ಯಗಳ ಬಗ್ಗೆ ಅರಿವು ಉಂಟಾದಾಗ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ. ಅಂತೆಯೇ ಇಲಾಖೆಯಲ್ಲಿ ಯಾವ ಅಧಿಕಾರಿಯೂ ಹೆಚ್ಚಲ್ಲ, ಕಡಿಮೆಯಲ್ಲ, ಪೊಲೀಸ್ ಪೇದೆ ಸೇರಿದಂತೆ ಇಲಾಖೆಯ ಎಲ್ಲ ಹಿರಿಯ ಹಾಗೂ ಕಿರಿಯ ಅಧಿಕಾರಿಗಳ ಸಹಕಾರ ಹಾಗೂ ಸಮನ್ವಯತೆಯಿಂದಲೇ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಇನ್ನು ಇತರ ಇಲಾಖೆಗಳಲ್ಲಿಯೂ ಕೆಲವು ಬಾರಿ ಸಮಸ್ಯೆಗಳುಂಟಾದಾಗ ಆಗ ಪೊಲೀಸರೂ ಅಗತ್ಯ ಸಹಕಾರ ನೀಡಿ ಸಹಕರಿಸುತ್ತಿರುವುದೂ ಕೂಡ ಶ್ಲಾಘನೀಯ. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಪೊಲೀಸರು ತೋರಿದ ಸೇವಾಮನೋಭಾವವನ್ನು ಯಾರೂ ಕೂಡ ಮರೆಯುವಂತಿಲ್ಲ. ಚೆಕ್ಪೋಸ್ಟ್ ಸೇರಿದಂತೆ ಇನ್ನೀತರ ಕೋವಿಡ್ ಕಾರ್ಯಗಳಲ್ಲಿ ಪೊಲೀಸರ ಸಹಕಾರವೂ ಅತ್ಯಂತ ಪ್ರಮುಖವಾಗಿದೆ ಎಂದರು.
ಹೀಗೆ ಸಮಾಜದಲ್ಲಿ ಹಗಲಿರುಳೆನ್ನದೇ ಸೇವಾ ಹಾಗೂ ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ಪೊಲೀಸರ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸಿ, ಅದನ್ನು ಸದ್ಭಳಕೆ ಮಾಡುತ್ತಿರುವುದು ಪ್ರಶಂಸನೀಯವಾಗಿದ್ದು, ಪೊಲೀಸರು ಸರ್ಕಾರದ ಆರೋಗ್ಯ ಭಾಗ್ಯದಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಂತೆಯೇ ತಮ್ಮ ಆರೋಗ್ಯದ ಕಡೆಗೂ ಅದರಲ್ಲೂ ದೈಹಿಕ ಸದೃಢತೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮತ್ತಷ್ಟು ಪರಿಣಾಮಕಾರಿ ಸೇವೆ ನೀಡಲು ಸಾಧ್ಯ ಎಂದು ಅವರು ಸಲಹೆ ನೀಡಿದರು.