ವಿಜಯಪುರ: ವರ್ಗಾವಣೆಗೊಂಡು ಬೇರೆ ಶಾಲೆಗೆ ಹೋಗುತ್ಯಿದ್ದ ಗುರುಮಾತೆಯ ಅಗಲಿಕೆ ಸಹಿಸದ ಅವರ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹ ಗುರುಮಾತೆಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ಪ್ತಸಂಗ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕಳೆದ 11 ವರ್ಷಗಳಿಂದ ಬಳೂತಿಯ ಸರ್ಕಾರಿ ಹಿರಿಯ ಪ್ರಾಥಮಿಕ ತೋಟದ ಶಾಲೆಯಲ್ಲಿ ಹಿರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಗುರುಮಾತೆ ಪ್ರತಿಭಾ ತೊರವಿ ಅವರಿಗೆ ಇತ್ತೀಚಿಗೆ ತಮ್ಮ ಸ್ವಂತ ಗ್ರಾಮದ ಸಮೀಪದ ಶಾಲೆಗೆ ವರ್ಗಾವಣೆ ಗೊಂಡಿದ್ದರು. ಅವರನ್ನು ಬೀಳ್ಕೋಡುವ ಹಾಗೂ 5ನೇ ತರಗತಿಯ ಮಕ್ಕಳ ಶುಭಕೋರುವ ಕಾರ್ಯಕ್ರಮ ನೋಡುಗರನ್ನು ಹೃದಯಸ್ಮರ್ಶಿಯನ್ನಾಗಿ ಮಾಡಿತು. ಗುರುಮಾತೆ ಪ್ರತಿಭಾ ತೊರವಿಯವರನ್ನು ಬಿಟ್ಟು ಹೋಗಬೇಡಿ ಎಂದು ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು. ಮಕ್ಜಳ ಹಾಗೂ ಗುರುಮಾತೆಯ ಭಾಂದವ್ಯ ನೋಡಿದ ಪೋಷಕರು ಸಹ ಕಣ್ಣೀರು ತಡೆದು ಕೊಳ್ಳದೇ ಅವರು ಸಹ ಅತ್ತರು. ತಮ್ಮ ಶಾಲೆಯ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಒಳ್ಳೆಯ ಸಂಸ್ಕಾರ, ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮಕ್ಕಳ ಹೃದಯ ಗೆದ್ದಿದ್ದರು.
ಗುರುಮಾತೆ ಪ್ರತಿಭಾ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ಗುರುಮಾತೆ ತೊರವಿ ಅವರು ವರ್ಗಾವಣೆಗೊಂಡು ಹೋಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಗ್ರಾಮದ ಜನ ತಂಡೋಪ ತಂಡವಾಗಿ ಶಾಲೆಗೆ ಆಗಮಿಸಿ ವರ್ಗಾವಣೆ ರದ್ದುಗೊಳಿಸಿ ಇಲ್ಲಿಯೇ ಮುಂದುವರೆಸುವಂತೆ ಮನವಿ ಸಲ್ಲಿಸಿದರು. ಆದರೆ ಸರ್ಕಾರದ ನಿಮಾವಳಿ ಮೀರಲು ಆಗುವದಿಲ್ಲ ಹೀಗಾಗಿ ಹೋಗಲೇ ಬೇಕು ಎಂದು ಗುರುಮಾತೆ ತೊರವಿ ಗ್ತಾಮಸ್ಥರಲ್ಲಿ ಮನವಿ ಮಾಡಿಕೊಳ್ಳುವುದರ ಜತೆ ಅವರಿಂದ ಒಂದು ವಚನ ಸಹ ತೆಗೆದುಕೊಂಡರು, ಯಾವುದೇ ಕಾರಣಕ್ಕೂ ತೋಟದ ವಸ್ತಿ ಶಾಲೆ ಮಕ್ಕಳನ್ನು ಶಾಲೆ ಬಿಡಿಸಬಾರದು ಎಂದು ಹೇಳಿದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜ ದಲ್ಲಿ ಗೌರವ ಯುತವಾಗಿ ಬಾಳುವಂತೆ ಮಾಡು ತ್ತೇವೆ ಎಂದರು.
ಸೀರೆ ಉಡಿಸಿ ಬೀಳ್ಕೊಟರು: ಗುರುಮಾತೆ ಪ್ರತಿಭಾ ತೊರವಿಯವರಿಗೆ ಗ್ರಾಮದ ಮಹಿಳೆಯರು ಅರಿಸಿಣ, ಕುಂಕುಮ ನೀಡಿ ಸೀರೆ ತೊಡಿಸಿದರು. ಕೆಲವರು ಗಡಿಯಾರ ಸೇರಿ ಹತ್ತಾರು ನೆನಪಿನ ಕಾಣಿಕೆ ನೀಡಿ ತಮ್ಮ ಅಭಿಮಾನ ಮೆರೆದರು.
ಇದಕ್ಕೆ ಪ್ರತಿಯಾಗಿ ಗುರುಮಾತೆ ತೊರವಿ ಸಹ ಮಕ್ಕಳಿಗೆ ನೋಟಬುಕ್,ಫೇಸ್ಸಲ್ ಸೇರಿಯ ಕಲಿಕೆಯ ಉಪಯುಕ್ತ ಉಪಕರಣ ನೀಡಿ ಮಕ್ಕಳನ್ನು ಓದುವತ್ತ ಹುರಿದುಂಬಿ ಸಿದರು.