ವಿಜಯಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ.ರಂದೀಪ ಅವರು ವಿಜಯಪುರ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆಗೆ ಪ್ರವೇಶಿಸುತ್ತಿದಂತೆ ಸುತ್ತಲು ವೀಕ್ಷಣೆ ನಡೆಸಿದ ಆಯುಕ್ತರು, ರೋಗಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆಯ ಪ್ರವೇಶದ್ವಾರೊಳಗಡೆ ವೈದ್ಯರ ಹೆಸರು, ವಿವಿಧ ವಿಭಾಗಗಳ ಸಂಕ್ಷಿಪ್ತ ವಿವರದ ಮಾಹಿತಿಯನ್ನು ಅಳವಡಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರಾದ
ಎಲ್.ಎಸ್.ಲಕ್ಕಣ್ಣನವರ ಅವರಿಗೆ ಸೂಚಿಸಿದರು.
ಸಕ್ರಿಯ ಹೆರಿಗೆ ಕೋಣೆ ಪ್ರವೇಶಿಸಿದ ಆಯುಕ್ತರು, ಸಿಜರಿಯನ್ ಬಳಿಕ ಹೊಲಿಗೆಯಿಂದಾದ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ತ್ರೀರೋಗ ತಜ್ಞ ವೈದ್ಯರು, ಇನ್ನೀತರ ವೈದ್ಯರು ಮತ್ತು ಶುಶ್ರೂಕಿಯರಿಂದ ಮಾಹಿತಿ ಪಡೆದರು.
ಸೋಂಕು ಉಲ್ಬಣಿಸಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರೊಂದಿಗೆ ಆಯುಕ್ತರು ಇದೆ ವೇಳೆ ಖುದ್ದು ಮಾತನಾಡಿದರು. ಈಗ ಹೇಗಿದೆ ಆರೋಗ್ಯ? ಸೋಂಕು ನಿವಾರಣೆ ಆಗುತ್ತಿದೆಯೇ? ಎಂದು ಕೇಳಿ ಮಹಿಳೆಯರ ಆರೋಗ್ಯ ವಿಚಾರಿಸಿದರು. ಬಳಿಕ ಖುದ್ದು ಮಹಾ ಶಸ್ತ್ರ ಚಿಕಿತ್ಸಾ ಘಟಕಕ್ಕೂ ಭೇಟಿ ನೀಡಿ, ಯಾಕೆ ಸೋಂಕು ಕಾಣಿಸಿತು? ಅವಘಡಕ್ಕೆ ಏನು ಕಾರಣ? ಎಂದು ಓಟಿಯ ಇನ್ ಚಾರ್ಜ್ ಅವರಿಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಒಂದೇ ಶಸ್ತ್ರ ಚಿಕಿತ್ಸಾ ಘಟಕವಿರುವುದು, ಶಸ್ತ್ರ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಲೂ ಅವಘಡ ಉಂಟಾಯಿತು. ಕಡಿಮೆ ಪ್ರಮಾಣದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಈ ಕೊರತೆಯನ್ನು ಹೋಗಲಾಡಿಸಬೇಕು ಎಂದು ವೈದ್ಯರು ಮತ್ತು ಸಿಬ್ಬಂದಿ ಆಯುಕ್ತರಲ್ಲಿ ಮನವಿ ಮಾಡಿದರು.
*ರೋಗಿಗಳ ಸಂಬಂಧಿಕರೊಂದಿಗೆ ಮಾತು:* ನೀವು ಯಾವಾಗ ಆಸ್ಪತ್ರೆಗೆ ಬಂದಿದ್ದೀರಿ? ಏನಾಗಿತ್ತು? ಎಂದು ಇದೆ ವೇಳೆ ಆಯುಕ್ತರು ಭೈರವಾಡಗಿಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿಯ ಸಂಬಂಧಿಯೊಂದಿಗೆ ಸಮಾಲೋಚನೆ ನಡೆಸಿದರು. ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ಡವಳಗಿ ಗ್ರಾಮದ ಮಹಿಳೆಯೊಬ್ಬರೊಂದಿಗು ಕೂಡ ಮಾತನಾಡಿ ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ವಿಚಾರಿಸಿದರು.
*ವೆಂಟಿಲೇಟರ್ ಪೂರೈಕೆಗೆ ಕ್ರಮ:* ನವಜಾತ ಶಿಶುಗಳ ವಿಶೇಷ ಚಿಕಿತ್ಸಾ ಘಟಕಕ್ಕು ಕೂಡ ಭೇಟಿ ನೀಡಿ ಚರ್ಚಿಸಿ, ವೈದ್ಯರ ಬೇಡಿಕೆಯಂತೆ ವೆಂಟಿಲೇಟರ್ ಪೂರೈಕೆಗೆ ಕ್ರಮ ವಹಿಸುವುದಾಗಿ ಆಯುಕ್ತರು ತಿಳಿಸಿದರು. ನವಜಾತ ಶಿಶು ಆರೈಕೆ ಘಟಕದಲ್ಲಿ ನಡೆಯುತ್ತಿರುವ ಕಾಂಗರೂ ಮಾದರಿ ಆರೈಕೆಯ ಬಗ್ಗೆ ಮಾಹಿತಿ ಪಡೆದರು.
*ಸಂಜೆಯೊಳಗೆ ಬಿಸಿನೀರು ಪೂರೈಸಲು ಸೂಚನೆ:* ಆಸ್ಪತ್ರೆಯ ಮಹಿಳಾ ವಾರ್ಡನ ಸ್ನಾನ ಮತ್ತು ಶೌಚ ಗೃಹಕ್ಕೆ ಭೇಟಿ ನೀಡಿದಾಗ, ಬಿಸಿ ನೀರು ಪೂರೈಸುವಂತೆ ರೋಗಿಯ ಸಂಬಂಧಿಗಳು ಆಯುಕ್ತರಿಗೆ ಮನವಿ ಮಾಡಿದರು. ನಾಲ್ಕು ದಿನವಾಯ್ತು, ನಮಗೆ ಆಸ್ಪತ್ರೆಯಲ್ಲಿ ಬಿಸಿ ನೀರು ಸಿಗುತ್ತಿಲ್ಲ ಎಂದು ಸಿಂಧಗಿಯಿಂದ ಬಂದಿದ್ದ
ಈರಮ್ಮ ಎನ್ನುವ ವೃದ್ಧೆಯು ತಿಳಿಸಿದಾಗ, ಸಂಜೆಯಿಂದಲೇ ಬಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಆಯುಕ್ತರು, ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ನಿರ್ದೇಶನ ನೀಡಿದರು.
*ಪ್ರಸ್ತಾವನೆ ಸಲ್ಲಿಸಲು ಸೂಚನೆ:*
ಆಸ್ಪತ್ರೆಗೆ ಮತ್ತೊಂದು ಅಂಬುಲೆನ್ಸ್ ಅಗತ್ಯವಿದೆ. ಆಸ್ಪತ್ರೆಯ ಲಿಫ್ಟ್ ಸರಿ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಬೇಕಿದೆ ಎಂದು ವೈದ್ಯಾಧಿಕಾರಿಗಳು ಆಯುಕ್ತರ ಗಮನಕ್ಕೆ ತಂದರು. ಈ ಬಗ್ಗೆ ವಿವರವಾದ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲು ಆಯುಕ್ತರು ಸೂಚನೆ ನೀಡಿದರು.
*ಕಾಮಗಾರಿ ಪರಿಶೀಲನೆ:*
ಜಿಲ್ಲಾಸ್ಪತ್ರೆಯಲ್ಲಿ
ನಿರ್ಮಾಣ ಹಂತದಲ್ಲಿರುವ
50 ಹಾಸಿಗೆಯ ಹೆಚ್ಚುವರಿ ಕಟ್ಟಡದ ಕಾಮಗಾರಿಯನ್ನು, ಹತ್ತಿರದಲ್ಲಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಹೆಚ್ಚುವರಿ ಮೇಲ್ಪಹಡಿ ಕಟ್ಟಡ ಕಾಮಗಾರಿಯನ್ನು ಮತ್ತು ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ ಕಟ್ಟಡ ಕಾಮಗಾರಿಯನ್ನು ಸಹ ಇದೆ ವೇಳೆ ಆಯುಕ್ತರು ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಡಾ.ಎ.ಜೆ.ಬಿರಾದಾರ, ಡಾ.ವಿಜಯಾ, ಡಾ.ರಾಜೇಶ್ವರಿ, ಡಾ.ಚೆನ್ನಮ್ಮ ಕತ್ತಿ, ಡಾ.ಮೋರೆ, ಡಾ.ಗುಂಡಳ್ಳಿ ಹಾಗೂ ಇನ್ನೀತರರು ಇದ್ದರು.