ವಿಜಯಪುರ: ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಭಿತ್ತನೆ ಬೀಜಗಳು ಹಂತಹಂತವಾಗಿ ಬರಲಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಕೊರತೆಯಾಗದಂತೆ ಅವುಗಳನ್ನು ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಯಂಕಪ್ಪ ಕ್ಷತ್ರಿ ಹೇಳಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿಸಂಗ್ರಹಿಸಿದ ಭಿತ್ತನೆ ಬೀಜಗಳನ್ನು ಸೋಮವಾರ ರೈತರಿಗೆ ವಿತರಿಸಿ ಅವರು ಮಾತನಾಡಿದರು.
ಭಿತ್ತನೆಗೆ ಬೇಕಾದ ಸೂರ್ಯಕಾಂತಿ-480 ಕೆ.ಜಿ ದಾಸ್ತಾನು ಇದೆ,ಇನ್ನೂ 10 ಕ್ವಿಂಟಲ್ಗೆ ಬೇಡಿಕೆ ಸಲ್ಲಿಸಲಾಗಿದೆ, ತೊಗರಿ-70 ಕ್ವಿಂಟಲ್ ಬೇಡಿಕೆ ಸಲ್ಲಿಸಿದ್ದು, 25 ಕ್ವಿಂಟಲ್ ದಾಸ್ತಾನು ಇದ್ದು,ಅವಶ್ಯತೆಗೆ ತಕ್ಕಂತೆ ಗೋವಿನಜೋಳದ ಬೀಜಗಳು,ಸಜ್ಜೆ ಸಂಗ್ರಹವಾಗಿವೆ. ಪ್ರತಿ ರೈತರಿಗೂ ಬೀಜಗಳನ್ನು ಸರಿಯಾಗಿ ತಲುಪುವತ್ತ ಗಮನ ಹರಿಸಲು ಸೂಚಿಸಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಕಚೇರಿಯ ಸಿಬ್ಬಂದಿ ಸರಿಯಾದ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ,ರೈತರು ಹಸಿ ನೋಡಿ ಬಿತ್ತಬೇಕು ಎಂದು ಯಂಕಪ್ಪ ಕ್ಷತ್ರಿ ಹೇಳಿದರು.
ಸಾಮಾನ್ಯ ರೈತರಿಗೆ ಶೇ.50 ರಷ್ಟು ಸಹಾಯಧನ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ರೈತರಿಗೆ ಶೇ.75 ರಷ್ಟು ಸಹಾಯಧನದೊಂದಿಗೆ ಬಿತ್ತನೆ ಬೀಜ ನೀಡಲಾಗುವುದು. ಬೀಜವನ್ನು ಪಡೆಯುವಾಗ ರೈತರು ಆಧಾರ್ ಕಾರ್ಡ್ ಹಾಗೂ ಜಮೀನಿನ ಉತಾರೆಯನ್ನು ತರಬೇಕು. ಪ.ಜಾತಿ, ಪ.ಪಂಗಡ ರೈತರು ದಾಖಲೆಗಳೊಂದಿಗೆ ಆರ್ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಕ್ಷತ್ರಿ ಹೇಳಿದರು.
ಈ ವೇಳೆ ವಿಜಯಕುಮಾರ ಕ್ಷತ್ರಿ, ಖಾಜಾಮೀನ ಕಾಜಿ,ವೀರೇಶ ಹಂಪನಗೌಡರ, ಚಂದ್ರು ಹಂಪನಗೌಡ್ರ ಸಂಗಪ್ಪ ಹಾದಿಮನಿ ರದ್ರೇಶ ಚಳಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಬೀಜ ಖರೀದಿಗೆ ಆಗಮಿಸಿದ್ದರು. ವರದಿ ಕಾಶಿನಾಥ ಬಿರಾದಾರ ನಾಲತವಾಡ