ವಿಜಯಪುರ: ಜಿಲ್ಲೆಯ ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದ ಗಂಗಸ್ಥಳದ ಮೂಲಸ್ಥಾನವಾಗಿರುವ ರಾಜವಾಡೆಯಲ್ಲಿಯ ಪುರಾತನ ಭೀಮನಭಾವಿ ಸ್ವಚ್ಛತಾ ಕಾರ್ಯವನ್ನ ಇಂದು ಬೆಳಿಗ್ಗೆಯಿಂದ ತಾಳಿಕೋಟೆಯ ಭಕ್ತವೃಂದವು ಮಾಡುತ್ತಿದೆ.
ಪಟ್ಟಣದಲ್ಲಿ ವಿವಿಧ ಜಾತ್ರಾ ಉತ್ಸವಗಳಾಗಲಿ ಅಥವಾ ವೈಯಕ್ತಿಕ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿರುವ ಪುರಾತನ ಭೀಮನಭಾವಿಯು ಬಹಳ ವರ್ಷಗಳಿಂದ ಸ್ವಚ್ಛತೆ ಕಾಣದೆ ಹಾಗೆಯೇ ಉಳಿದುಕೊಂಡಿದೆ. ಇದನ್ನು ಗಮನಿಸಿರುವ ತಾಳಿಕೋಟೆಯ ಭಕ್ತವೃಂದವು ತಮ್ಮೂರಿನ ಹೆಮ್ಮೆಯ ಭೀಮನಭಾವಿಯನ್ನು ಸ್ವಚ್ಛತೆಗೊಳಿಸಲು ವಿವಿಧ ರೀತಿಯ ತಂಡಗಳನ್ನು ರಚಿಸಿಕೊಂಡು ಸಂಪೂರ್ಣ ಸ್ವಚ್ಛತೆಗೊಳಿಸಲು ಮುಂದಾಗಿರುವುದು ಶ್ಲಾಘನೀಯ. ಕಳೆದ 3 ವರ್ಷಗಳಿಂದ ಕೊರೊನಾ ಕಾರಣದಿಂದ ಖಾಸತೇಶ್ವರ ಜಾತ್ರಾ ಮಹೋತ್ಸವವು ನಡೆಯದೆ ಇರುವದರಿಂದ ಈ ಸಲ ಖಾಸ್ಗತೇಶ್ವರ ಜಾತ್ರಾ ಮಹೋತ್ಸವವು ನಾಳೆಯಿಂದ ಪ್ರಾರಂಭಗೊಳ್ಳಲಿದ್ದು ಜಾತ್ರೆಯನ್ನು ಅದ್ದೂರಿಯಾಗಿ ವೈಭವವಾಗಿ ಆಚರಿಸಲು ಎಲ್ಲ ರೀತಿಯ ತಯಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಕಾರಣ ಸದ್ಭಕ್ತರು ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಡಿ.ವಿ. ಪಾಟೀಲ, ಮುದಕಣ್ಣ ಬಡಿಗೇರ, ಜೈಸಿಂಗ್ ಮೂಲಿಮನಿ ಇನ್ನಿತರರು ಮನವಿ ಮಾಡಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಇಂದು ಬೆಳಗಿನಿಂದಲೇ ಪ್ರಾರಂಭವಾದ ಭೀಮನಭಾವಿ ಸ್ವಚ್ಚತಾಕಾರ್ಯ ನಡೆಯುತ್ತಿದೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಾದಿಯಾಗಿ ಮತ್ತು ಪಟ್ಟಣದ ಸರ್ವ ಧರ್ಮದ ಯುವಕರು ಪಾಲ್ಗೊಂಡು ಈ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಿದ್ದರು.
ಖಾಸ್ಗತೇಶ್ವರ ಮಠದ ಪಿಠಾಧಿಪತಿ ಸಿದ್ದಲಿಂಗ ದೇವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.