ವಿಜಯಪುರ: ದೇವರ ಮೇಲೆ ಭಕ್ತರು ಎಷ್ಟೊಂದು ಶೃದ್ದೆ, ಭಕ್ತಿ ಇಟ್ಟಿರುತ್ತಾರೆ ಎಂಬುದನ್ನು ತಿಳಿಯಲು ದೇವರು ಆಗಾಗ ಹಲವು ಪರೀಕ್ಷೆಗಳನ್ನು ಮಾಡುತ್ತಾನೆ ಎಂದು ನಾಗಠಾಣದ ಉದಯಲಿಂಗೇಶ್ವರ ಮಠದ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಬುಧವಾರ ಶ್ರೀ ಸಂಗಮನಾಥ ದೇವಾಲಯದ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಶಿರ್ವಚನ ನೀಡಿದರು.
ಹನ್ನೊಂದು ವರ್ಷದ ಹಿಂದೆ ಪ್ರತಿಷ್ಠಾಪಿಸಿದ ಸಂಗಮನಾಥನ ಮೂರ್ತಿ ಈಗ ಕಳ್ಳತನವಾಗಿದೆ. ಆ ಮೂರ್ತಿ ಬೇರೊಂದು ಸ್ಥಳದಲ್ಲಿ ಸಾವಿರಾರು ಹೊಸ ಭಕ್ತರಿಗೆ ದರ್ಶನ ಕೊಡುತ್ತಿರುತ್ತಾನೆ. ಈ ಗ್ರಾಮದ ಭಕ್ತರ ಭಕ್ತಿ ಕುಂದದೆ ಇಂದು ಹೊಸ ಮೂರ್ತಿಯನ್ನು ಭವ್ಯ ಮೆರವಣಿಗೆ, ಉತ್ಸವದೊಂದಿಗೆ ಪ್ರತಿಷ್ಠಾಪಿಸಿ ಮತ್ತೇ ದೇವರ ಸೇವೆ ಮಾಡಲು ಗ್ರಾಮಸ್ಥರು ಆಗಮಿಸಿದ್ದಿರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮದ ಜನರು ಭಕ್ತಿಯಲ್ಲಿ, ಅನ್ನದಾಸೋಹದಲ್ಲಿ ಸದಾ ದೇವರ ಸೇವೆ ಮಾಡುವ ಮನೋಭಾವವುಳ್ಳ ಎಲ್ಲರಿಗೂ ಸಂಗಮನಾಥ ಒಂದು ಪವಾಡ ಲೀಲೆಯನ್ನು ಮಾಡಿ ಈ ದೇವಾಲಯದಿಂದ ಹೊಸ ಸ್ಥಳಕ್ಕೆ ಹೋಗಿ, ಇಂದು ನಿಮ್ಮೂರಿಗೆ ಹೊಸ ರೂಪ ತಾಳಿ ಆಗಮಿಸಿದ್ದಾನೆ. ಸರ್ವರಿಗೂ ಆರೋಗ್ಯ, ನೆಮ್ಮದಿ, ಐಶ್ವರ್ಯ ಕೊಡಲಿ ಎಂದು ಹಾರೈಸಿದರು.
ಸುಮಂಗಲೆಯರ ಕುಂಭ ಮೆರವಣಿಗೆ: ಗ್ರಾಮದ ಲಕ್ಷ್ಮಿ ದೇವಸ್ಥಾನದಿಂದ ಇನ್ನೂರಕ್ಕೂ ಅಧಿಕ ಸುಮಂಗಲೆಯರು ಕುಂಬ ಹೊತ್ತುಕೊಂಡು, ಆರತಿ ವಿವಿಧ ವಾಧ್ಯಗಳೊಂದಿಗೆ ನೂತನ ಸಂಗಮನಾಥ ಮೂರ್ತಿಯ ಭವ್ಯ ಮೆರವಣಿಗೆಯೂ ಎತ್ತಿನ ಗಾಡಿಯಲ್ಲಿ ಸಾಗಿತು. ದಾರಿಯುದ್ದಕ್ಕೂ ಓಂ ನಮಃ ಶಿವಾಯ, ಸಂಗಮನಾಥನ ಜಪ, ಭಕ್ತಿ ಗೀತೆಗಳು ಭಕ್ತರಲ್ಲಿ ಮೊಳಗಿದವು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸಂಗಮನಾಥ ಸೇವಾ ಕಮೀಟಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರು, ಶಾಲಾ ಮಕ್ಕಳು ಭಾಗವಹಿಸಿದ್ದರು.