ವಿಜಯಪುರ: ಆಧಾರ ಕಾಡ್೯ನಂತೆಯೇ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಆಯುಷ್ಮಾನ ಭಾರತ (ಆಭಾ) ಕಾಡ್೯ ಹೊಂದುವುದು ಅವಶ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಶ ಚವ್ಹಾಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆರೋಗ್ಯ ಇಲಾಖೆಯ ವತಿಯಿಂದ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಆರೋಗ್ಯ ಸೇವೆ ಒದಗಿಸುವ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ ಕಾಡ್೯ ನೊಂದಣಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಜನತೆಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸುತ್ತಿದ್ದು, ಎಲ್ಲರೂ ತಮ್ಮ ಆಧಾರ್ ಕಾಡ್೯ ಮತ್ತು ಪಡಿತರ ಕಾಡ್೯ಗಳನ್ನು ಲಿಂಕ್ ಮಾಡಿಸಿ ಆಯುಷ್ಮಾನ ಭಾರತ ಕಾಡ್೯ ಮಾಡಿಸಿಕೊಳ್ಳಬೇಕು ಎಂದರು.
ಹೆಲ್ತ್ ಕಾಡ್೯ ಅಕೌಂಟ್ ನಲ್ಲಿ ನೊಂದಣಿ ಮಾಡಿಸುವುದರಿಂದ ಆಭಾ ಕಾಡ್೯ ಮೂಲಕ ಯಾವುದೇ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಹಾಗೂ ಆತನ ಆರೋಗ್ಯದ ಸ್ಥಿತಿಗತಿ ಕುರಿತು ತಿಳಿದುಕೊಳ್ಳಲು ಸಹಾಯಕವಾಗುವುದು ಎಂದು ಹೇಳಿದರು.
.
ಬ್ಯಾಂಕ್ ಖಾತೆ, ಪಡಿತರ ಕಾರ್ಡಿಗೆ ಆಧಾರ ಕಾಡ್೯ ಹೇಗೇ ಆಧಾರವೋ ಅದೇ ರೀತಿ ನಮ್ಮೆಲ್ಲರ ಆರೋಗ್ಯಕ್ಕೆ ಆಯುಷ್ಮಾನ್ ಭಾರತ ಆರೋಗ್ಯ ಕಾಡ್೯ ಆಧಾರವಾಗಿದೆ ಎಂದರು.
ಆಭಾ ಕಾಡ್೯ ಮೂಲಕ ಬಿಪಿಎಲ್ ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಠ ಐದು ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆ ಪಡೆಯುವ ಸೌಲಭ್ಯವಿದೆ. ಅದೇ ರೀತಿ ಎಪಿಎಲ್ ಕುಟುಂಬಕ್ಕೆ ವಾರ್ಷಿಕ ಮಿತಿ ಗರಿಷ್ಟ ಒಂದೂವರೆ ಲಕ್ಷ ರೂ.ಗಳವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.
ಆಯುಷ್ಮಾನ್ ಭಾರತ ಆರೋಗ್ಯ ಕಾಡ್೯ ಮಾಡಿಸಬೇಕಾದರೆ ಆಧಾರ ಕಾಡ್೯ ಮತ್ತು ಪಡಿತರ ಕಾಡ್೯ ಹೊಂದಿರಬೇಕು. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆಭಾ ಕಾಡ್೯ ಎಲ್ಲರಿಗೂ ವರದಾನವಾಗಿದ್ದು, ಎಲ್ಲರೂ ಆಭಾ ಕಾಡ್೯ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಆಭಾ ಕಾಡ್೯ ಮಾಡಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯನ್ನು ಸಂಪಕಿಸಬಹುದು ಎಂದು ಅವರು ಹೇಳಿದರು.
ಆಯುಷ್ಮಾನ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಂಪತ್ತಕುಮಾರ ಗುಣಾರಿ ಮಾತನಾಡಿ, ಆಭಾ ಕಾಡ್೯ನಿಂದ ಸಾರ್ವಜನಿಕರಿಗೆ ದೊರೆಯುವ ಉಚಿತ ಆರೋಗ್ಯ ಸೇವೆಗಳ ಕುರಿತು ವಿವರಿಸಿದರು.
ಆಭಾ ಕಾಡ್೯ ಮಾಡಿಸಿಕೊಂಡರೆ, ಹೃದಯಾಘಾತ, ಅಪಘಾತ, ಬೆಂಕಿ ಅವಘಡ, ಹಾವು ಕಚ್ಚಿದಾಗ ಮುಂತಾದ ತುರ್ತು ಸಂದರ್ಭಗಳಲ್ಲಿ ರೋಗಿಯು ನೇರವಾಗಿ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಇಲ್ಲವೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವೇಳೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ರೆಫರಲ್ ಆಧಾರದ ಮೇಲೆ ರೋಗಿಯು ತಾನು ಬಯಸುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ವಿಜಯಪುರದಲ್ಲಿ 25 ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ ಮಾತನಾಡಿ, ಸದಾ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಲು ತಪ್ಪದೇ ಆಭಾ ಕಾಡ್೯ ಮಾಡಿಸಿಕೊಳ್ಳಬೇಕು. ಈ ಕಾಡ್೯ನಿಂದ ತುಂಬಾ ಪ್ರಯೋಜನವಿದೆ ಎಂದರು.
ಕಾನಿಪ ಸಂಘದ ಜಿಲ್ಲೆಯ ಎಲ್ಲ ತಾಲೂಕಾ ಘಟಕದವರು ಕೂಡ ತಮ್ಮ ತಾಲೂಕಾ ಕೇಂದ್ರಗಳಲ್ಲಿ ಅಲ್ಲಿನ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಇಂಥ ಶಿಬಿರ ಏರ್ಪಡಿಸಿ ಸದಸ್ಯರಿಗೆ ಆಭಾ ಕಾಡ್೯ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಐನಾಪುರ ಗ್ರಾಮ ಒನ್ ಕೇಂದ್ರದ ಸಂತೋಷ್ ರಾಠೋಡ್, ಸಂಘದ ಜಿಲ್ಲಾ
ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ವಿಶೇಷ ಆಮಂತ್ರಿತರಾದ ಶ್ರೀಮತಿ ಕೌಶಲ್ಯ ಪನಾಳಕರ, ರಾಜ್ಯ ಕಾರ್ಯಕಾರಿ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ ವೇದಿಕೆ ಮೇಲಿದ್ದರು.
ಸಂಘದ ಉಪಾಧ್ಯಕ್ಷ ಇಂದುಶೇಖರ ಮಣೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಿಬಿರದಲ್ಲಿ ಸಂಘದ ಹಲವಾರು ಸದಸ್ಯರು ಭಾಗವಹಿಸಿ ಆಭಾ ಕಾಡ್೯ ಹೆಲ್ತ್ ಅಕೌಂಟ್ ಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರು ನೊಂದಾಯಿಸಿದರು.