ವಿಜಯಪುರ: ನಗರದ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದಲ್ಲಿ ಡಿಸೆಂಬರ್ 03ರ ಸಂಜೆ 6.30ಕ್ಕೆ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ಮಾಹೆಯ ಮೊದಲನೇ ಶನಿವಾರದಂದು ಐತಿಹಾಸಿಕ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಡಿ.03ರಂದು ಸಂಜೆ 6 ರಿಂದ ರಾತ್ರಿ 9ಗಂಟೆಯವರೆಗೆ ನಡೆಯುವ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮದಲ್ಲಿ ವಿಜಯಪುರದ ಕುಮಾರಿ ಕೃತಿಕಾ ಜಂಗಿಮಠ ಇವರಿಂದ ಕೊಳಲು ವಾದನ, ಶ್ರೀಶೈಲ್ ಹೂಗಾರ ಇವರಿಂದ ಹಾಸ್ಯ ಚಟಾಕಿ, ರತ್ನಮಾಲಾ ಡ್ಯಾನ್ಸ್ ಅಕಾಡೆಮಿಯಿಂದ ಸಮೂಹ ನೃತ್ಯ, ಪ್ರಕಾಶ ಸಿಂಗ್ ರಜಪೂತ ಅವರಿಂದ ಕನ್ನಡ ಗಜಲ್ ಗಾಯನ ಹಾಗೂ ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ “ವಾಲ್ಮೀಕಿ ರಾಮಾಯಣ” ನೃತ್ಯ ರೂಪಕ ಪ್ರದರ್ಶನಗೊಳ್ಳಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ತಿಳಿಸಿದ್ದಾರೆ.