ವಿಜಯಪುರ: ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದೇ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಇಲ್ಲಿಗೆ ಸಮೀಪದ ಘಾಳಪೂಜಿ ಗ್ರಾಮಕ್ಕೆ ಅಲಿಗೇಟರ್ ಜಾತಿಗೆ ಸೇರಿದ ಚಪ್ಪಟೆ ಮುಖದ ಉದ್ದನೆಯ ಬಾಯಿ ಇರುವ ಮೊಸಳೆ ಮರಿ ಎಂಟ್ರಿ ಕೊಟ್ಟಿದೆ.
ರೈತ ಬಸವರಾಜ ಶಂಕ್ರಣ್ಣ ಹುನಕುಂಟಿ ಇವರ ಮನೆಯ ನೀರಿನ ತೊಟ್ಟಿಗೆ ಬುಧವಾರ ರಾತ್ರಿಯೇ ಬಂದು ಸೇರಿದ್ದ ಮೊಸಳೆ ಮರಿಯನ್ನು ಬೆಳೆಗ್ಗೆ ನೋಡಿದ ಮನೆಯವರಿಗೆ ಅತೀವ ಆತಂಕವಾಗಿತ್ತು.
ಮುದ್ದೇಬಿಹಾಳ ತಾಲ್ಲೂಕಿನ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತಟದಲ್ಲಿ ರೈತನ ಮನೆಯಿದ್ದು, ನದಿಯ ನೀರು ಹೆಚ್ಚಾದ ಹಿನ್ನೆಲೆ ಮೊಸಳೆ ಮರಿ ರೈತನ ಮನೆಯ ವಾಟರ್ ಟ್ಯಾಂಕ್ ಗೆ ಬಂದು ಸೇರಿರಬಹುದು ಎಂದು ತರ್ಕಿಸಲಾಗುತ್ತಿದೆ.
ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಗಮನಕ್ಕೆ ತಂದಿದ್ದು, ಕಾರ್ಯಾಚರಣಿ ನಡೆಸಿದ ಅರಣ್ಯ ಇಲಾಖೆಯ ವಿಜಯಕುಮಾರ್ ಕಿತ್ತೂರು ಹಾಗೂ ಮುತ್ತಣ್ಣ ಸರೂರ ನೇತೃತ್ವದಲ್ಲಿ ಗ್ರಾಮಸ್ಥರ ನೆರವಿನೊಂದಿಗೆ,ಆತಂಕ ಮೂಡಿಸಿದ್ದ ಕೇವಲ ಎರಡು ಅಡಿ ಉದ್ದದ ಪುಟ್ಟ ಮರಿಯನ್ನು ಸುಲಭವಾಗಿ ಸೆರೆಹಿಡಿದರು.ತಮ್ಮ ಕೈಯಲ್ಲಿ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು, ದೊಡ್ಡ ಬಕೆಟ್ ಒಂದರಲ್ಲಿ ಸುರಕ್ಷಿತವಾಗಿಟ್ಟು ತೆಗೆದುಕೊಂಡು ಹೋದರು. ಈ ಪುಟ್ಟ ಮೊಸಳೆಯನ್ನು ವೀಕ್ಷಿಸಲು ಇಡೀ ಗ್ರಾಮದ ಜನ ಸಾಗರವೇ ಹರಿದು ಬಂದಿತ್ತು.ಈ ಮೊಸಳೆ ಮರಿಯನ್ನು ರಕ್ಷಿಸಿ ನಾರಾಯಣಪೂರ ಜಲಾಶಯದ ಹಿನ್ನೀರಿನಲ್ಲಿ ಬಿಡುವುದಾಗಿ ಹೇಳಿದ್ದಾರೆ ಅರಣ್ಯ ಇಲಾಖೆಯ ವಿಜಯಕುಮಾರ್ ತಿಳಿಸಿದರು.
ನದಿ ತೀರಕ್ಕ ಹೋಗಲು ಭಯ :
ಏತನ್ಮಧ್ಯೆ, ತುಂಬಿ ಹರಿಯುತ್ತಿರುವ ನದಿಯಿಂದ ಮೊಸಳೆಗಳು ಆಹಾರ ಅರಿಸಿ ಹೀಗೆ ಜನವಸತಿ ಪ್ರದೇಶಕ್ಕೆ ಮೊದಲನಿಂದಲೂ ನುಗ್ಗುತ್ತಿವೆ. ಹೀಗಾಗಿ, ನಾರಾಯಣಪೂರ ಅಣೆಕಟ್ಟು ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಭಯದಿಂದಾಗಿ ಜನ ಜಾನುವಾರಗಳು ನದಿ ತೀರದ ಆಸುಪಾಸಿನಲ್ಲಿ ಸಂಚರಿಸುವುದೇ ದುಸ್ತರವಾಗಿದೆ.