ವಿಜಯಪುರ: ಸರ್ಕಾರದ ವಿವಿಧ ಯೋಜನೆಗಳಡಿ ಇಲಾಖೆಗಳು ಟೆಂಡರ್ ಮೂಲಕ ಸರಕು, ಸಾಮಗ್ರಿಗಳನ್ನು ಖರೀದಿಸುವ ಸಂದರ್ಭದಲ್ಲಿ ನಕಲಿ ಐಎಸ್ಐ ಗುರುತಿನ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು ಆಹಾರ ಮತ್ತು ನಾಗರೀಕ ಸರಬರಾಜು ಸಚಿವಾಲಯ ವ್ಯಾಪ್ತಿಗೆ ಬರುವ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಎಲ್ಲ ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳಡಿ ಕಾರ್ಯಗತಗೊಳಿಸುವ ಸರಕುಗಳ ಖರೀದಿಗೆ ಸಂಬಂಧಿಸಿದಂತೆ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐಎಸ್ಐ ಗುರುತು ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಅದರಂತೆ ಐಎಸ್ಐ ಗುರುತು ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಹಾಗೂ ಐಎಸ್ಐ ಗುರುತಿನ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಎಲೆಕ್ಟ್ರಾನಿಕ್ ಮತ್ತು ಐಟಿ ಸಂಬಂಧಿತ ವಸ್ತುಗಳನ್ನು ಖರೀದಿಸುವಾಗ ಐಎಸ್ ಸಂಖ್ಯೆ, ಬಿಐಎಸ್ನಿಂದ ನೀಡಲಾದ 7 ಅಥವಾ 10 ಅಂಕಿಗಳ ಪರವಾನಗಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರುವ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಐಎಸ್ ನ ವೈಜ್ಞಾನಿಕ – ಡಿ ರಾಕೇಶ ತನ್ನೀರು ಅವರು ಮಾತನಾಡಿ, 2016 ರಲ್ಲಿ ಬಿಐಎಸ್ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಕಾಯ್ದೆಯನ್ನು ಉಲ್ಲಂಘನೆ ಮಾಡಿದವರಿಗೆ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಮೊದಲ ಉಲ್ಲಂಘನೆಗೆ 2 ಲಕ್ಷ ರೂ.ಗಳಗಿಂತ ಕಡಿಮೆ ಇರದ ಮೌಲ್ಯದ ದಂಡ ಹಾಗೂ ಎರಡನೇ ಮತ್ತು ಅನಂತರದ ಉಲ್ಲಂಘನೆಗಾಗಿ 5 ಲಕ್ಷ ರೂ.ಗಳಿಗಿಂತ ಕಡಿಮೆ ಇರದ ಮೌಲ್ಯದ ದಂಡ ಅಥವಾ ಉತ್ಪಾದಿಸಿದ/ಮಾರಾಟ ಮಾಡಿದ/ಮಾರಾಟ ಮಾಡಲು ಉದ್ದೇಶಿಸಿದ ಪ್ರಮಾಣದ ಗುರುತಿನ ಸರಕು ಸಾಮಗ್ರಿಗಳ ಮೌಲ್ಯದ ಹತ್ತು ಪಟ್ಟು ಮೌಲ್ಯದ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಿದರು.
ಯಾವುದೇ ತಯಾರಿಕಾ ಸಂಸ್ಥೆ ಕೈಗಾರಿಕೆಗಳು ತಯಾರಿಸುವ ಸರಕು, ಸಾಮಗ್ರಿ, ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬಿಐಎಸ್ ನಿಂದ ಪರವಾನಗಿ ಪಡೆದಿರುವ ಬಗ್ಗೆ ಜಾಲತಾಣ www.bis.gov.in ಅನ್ನು ಸಂಪರ್ಕಿಸಿ ಪರಿಶೀಲಿಸಬಹುದು ಎಂದು ತಿಳಿಸಿದರು.
ಬಿಐಎಸ್ ಪರವಾನಗಿ ಇಲ್ಲದೆ ಉತ್ಪನ್ನಗಳ ಮೇಲೆ ಐಎಸ್ಐ ಮಾರ್ಕ್ ಅಳವಡಿಸಲು ಅವಕಾಶವಿಲ್ಲ ಎಂದು ತಿಳಿಸಿದರಲ್ಲದೆ, ಗ್ರಾಹಕರಿಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಕೈಗಾರಿಕೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಗ್ರಾಹಕರು ಐಎಸ್ಐ ಗುರುತು ಇರುವ ಉತ್ಪನ್ನಗಳು ಮಾತ್ರ ಬಳಕೆಗೆ ಯೋಗ್ಯವೆಂದು ಅರಿಯಬೇಕು, ಉತ್ಪನ್ನಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ಅ0ತಹ ಕೈಗಾರಿಕೆ ಸಂಸ್ಥೆಗಳ ಮೇಲೆ ಬಿಐಎಸ್ ನಿಂದ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಉತ್ಪನ್ನ ವಸ್ತು/ ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸಲು ದೇಶದಲ್ಲಿ ಬಿಐಎಸ್ನ ಪ್ರಯೋಗಾಲಯ ಹಾಗೂ ಖಾಸಗಿ (ಬಿಐಎಸ್ ನಿಂದ ಅಧಿಕೃತವಾಗಿ ಗುರುತಿಸಿರುವ) ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಅದೇ ರೀತಿ ಚಿನ್ನ, ಬೆಳ್ಳಿ ಆಭರಣಗಳನ್ನು ಕೊಳ್ಳುವಾಗ ಬಿಐಎಸ್ ನ ಹಾಲ್ ಮಾರ್ಕ್ ಇರುವುದನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಶುದ್ಧ ಅಪ್ಪಟವಲ್ಲದ ಚಿನ್ನ, ಬೆಳ್ಳಿಯನ್ನು ಖರೀದಿಸಿ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ನ ಕಾರ್ಯ ಚಟುವಟಿಕೆಗಳ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದರು. ಸಭೆಯಲ್ಲಿ ಬಿಐಎಸ್ ನ ವಿವಿಧ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.