ವಿಜಯಪುರ : ಕಳೆದ ಎರಡು ಮೂರು ದಿನಗಳಿಂದ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಡೋಣಿ ನದಿಗೆ ಪ್ರವಾಹ ಹೆಚ್ಚುತ್ತಿದೆ. ಇದರಿಂದಾಗಿ ತಾಳಿಕೋಟೆ ಮೂಲಕ ವಿಜಯಪುರ, ಬಾಗಲಕೋಟೆಯತ್ತ ಹೋಗುವ ಮಾರ್ಗ ಬಂದಾಗುವ ಲಕ್ಷಣಗಳು ಹೆಚ್ಚಾಗಿವೆ.
ಮೇಲುಸೇತುವೆ ಶಿಥಿಲಗೊಂಡಿದ್ದು ಸಂಚಾರ ನಿಷೇಧಿಸಿದೆ. ಅದಕ್ಕೆ ಪಕ್ಕದಲ್ಲಿನ ಬ್ರಿಟಿಷ್ ಕಾಲದ ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಸತತ ಮಳೆಯಿಂದಾಗಿ ಈ ರಸ್ತೆಯೂ ಮುಳುಗುವ ಸಾಧ್ಯತೆಗಳು ಹೆಚ್ಚಾಗಿವೆ. ಡೋಣಿ ನದಿಗೆ ಹಡಗಿನಾಳ ಮಾರ್ಗದಲ್ಲಿರುವ ನೆಲಮಟ್ಟದ ಸೇತುವೆ ಸಂಚಾರ ಸ್ಥಗಿತವಾಗಿದೆ. ಇದಕ್ಕೆ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ಮೇಲ್ಸೇತುವೆ ಕಾರ್ಯ ಮುಕ್ತಾಯವಾಗಿದ್ದರೂ ರಸ್ತೆ ಜೋಡಣೆ ಕಾರ್ಯ ಮುಗಿದಿಲ್ಲ.
ಹೀಗಾಗಿ ತಾಳಿಕೋಟೆ ಪಟ್ಟಣದಿಂದ ಸುರಪುರ, ಕಲಬುರ್ಗಿಯತ್ತ ಹೋಗುವ ಹಾಗೂ ವಿಜಯಪುರ ಬಾಗಲಕೋಟೆಯತ್ತ ಹೋಗುವವರು ದೇವರ ಹಿಪ್ಪರಗಿ ಮಾರ್ಗದಲ್ಲಿ ಸುಮಾರು ೫೦ ರಿಂದ ೧೦೦ ಕ್ಕೂ ಅಧಿಕ ಕಿಮೀ ಸುತ್ತು ಹಾಕಬೇಕಾದ ಸಂದರ್ಭ ಎದುರಾಗಿದೆ.