ವಿಜಯಪುರ: ಮುಖ್ಯಮಂತ್ರಿ, ಸಚಿವರು ಹಾಗೂ ವಿಧಾನ ಮಂಡಲಗಳ ಸದಸ್ಯರ ಮಾಸಿಕ ವೇತನ ಮತ್ತು ಭತ್ಯೆ ಹೆಚ್ಚಳಕ್ಕಿಂತಲೂ ಗ್ರಾ.ಪಂ. ಸದಸ್ಯರಿಗೆ ಗೌರವಧನ ಹೆಚ್ಚಳವಾಗಬೇಕಿತ್ತು. ಗ್ರಾ.ಪಂ. ಸದಸ್ಯರಿಗೆ ಗೌರವಧನ ಹೆಚ್ಚಿಸುವವರೆಗೂ ನಾನು ಹೆಚ್ಚಿನ ವೇತನ ಪಡೆಯುವುದು ನನ್ನ ಮನಸಾಕ್ಷಿಗೆ ಒಪ್ಪುತ್ತಿಲ್ಲ. ಆದ್ದರಿಂದ ಕಳೆದ ಅಧಿವೇಶನದಲ್ಲಿ ಪಾಸ್ ಮಾಡಿರುವ ಬಿಲ್ (ವಿಧೇಯಕ) ಅನುಸಾರ ನನಗೆ ದೊರೆಯುವ ಹೆಚ್ಚಿನ ವೇತನವನ್ನು ನಾನು ಪಡೆಯದೆ ಇರಲು ನಿರ್ಧರಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಈ ಕುರಿತು ಬಿಲ್ ಪಾಸ್ ಆಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ಅಲ್ಲಿ ಪಾಸ್ ಆಗಿದ್ದು ಮಂತ್ರಿಮಂಡಲ, ವಿಧಾನ ಮಂಡಳದ ಸದಸ್ಯರಿಗೆ ಮಾತ್ರ ವೇತನ ಹೆಚ್ಚಳದ ವಿಧೇಯಕ ಮಂಡನೆಯಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾರರಿಂದ ಆಯ್ಕೆಯಾಗಿರುವ ನಾನು, ಅವರಿಗೆ ಯೋಗ್ಯ ನ್ಯಾಯ ದೊರಕಿಸದೇ ಹೆಚ್ಚಿನ ವೇತನ ನಾನು ಪಡೆಯುವುದಿಲ್ಲ,
ಎಲ್ಲಿಯವರೆಗೆ ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳ ಗೌರವಧನ, ಭತ್ಯೆ ಹೆಚ್ಚಳವಾಗುವುದಿಲ್ಲವೋ ಅಲ್ಲಿಯವರೆಗೆ ಕೂಡ ನಾನು ಸರ್ಕಾರದಿಂದ ಹಿಂದೆ ದೊರೆಯುತ್ತಿದ್ದ ಸೌಲಭ್ಯಗಳನ್ನು ಹೊರತುಪಡಿಸಿ ಇದೀಗ ಮತ್ತೆ ಒದಗಿಸಿರುವ ವೇತನವನ್ನು ನಾನು ಪಡೆಯುವದಿಲ್ಲ, ಈ ಕುರಿತಂತೆ ನಾನು ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿಯವರಿಗೆ ಪತ್ರವನ್ನು ಬರೆದು, ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ಕಟೀಲ್ ವಿರುದ್ಧ ಟೀಕಾಪ್ರಹಾರ
ಅಲ್ಲದೇ ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟಲ್ ಅವರು ಹೇಳಿಕೆ ನೀಡಿ, ಕೇರಳ ಮಾದರಿಯಲ್ಲಿ ಎಲ್ಲ ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಕಾರ್ ವಾಹನ ಒದಗಿಸಲಾಗುವುದು ಎಂದು ಹೇಳಿದ್ದರು. ಸರ್ಕಾರವನ್ನು ನಡೆಸುವ ಆಡಳಿತ ಪಕ್ಷದವರು ತಾವು ನೀಡಿದ ಹೇಳಿಕೆಗೆ
ಬದ್ಧರಾಗಬೇಕು. ಕೇವಲ ಚುನಾವಣಾ ಗಿಮಿಕ್ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಕಟೀಲ್ ವಿರುದ್ದ ಸುನೀಲಗೌಡ ವಾಗ್ದಾಳಿ ನಡೆಸಿದರು.
ಎಲ್ಲ ಗ್ರಾಮ ಪಂಚಾಯತ ಸದಸ್ಯರಿಗೆ ಸಂಬಂಧಿಸಿದ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಿಗೆ ಕಛೇರಿ ಕಾರ್ಯನಿಮಿತ್ತ ಸಂಚರಿಸಲು ಉಚಿತ ಬಸ್ ಪಾಸ್ ಒದಗಿಸುವಂತೆ ನಾನು ಸಲಹೆ ನೀಡುತ್ತೇನೆ. ಈ ಕುರಿತು ಹಿಂದೆ ಕೂಡ ನಾನು ಹಲವಾರು ಬಾರಿ ಒತ್ತಾಯ ಮಾಡಿದ್ದೇನೆ.
ಸರ್ಕಾರದ ಗಮನ ಸೆಳೆಯಿರಿ
ಗೌರವಧನ, ಭತ್ಯೆ ಹೆಚ್ಚಳ ಮಾಡುವುದು ಹಾಗೂ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ರಾಜ್ಯದಾದ್ಯಂತ ಇರುವ 96 ಸಾವಿರ ಗ್ರಾಮ ಪಂಚಾಯತ ಸದಸ್ಯರುಗಳು ತಮ್ಮ-ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಬೇಕೆಂದು ನಾನು ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತ ಸದಸ್ಯರಿಗೆ ವಿನಂತಿಸುವೆ ಎಂದು ಕರೆ ನೀಡಿದರು.
ಸರ್ಕಾರ ಈ ಎರಡು ಪ್ರಮುಖ ಬೇಡಿಕೆಗಳಿಗೆ ಸ್ಪಂಧಿಸದಿದ್ದರೆ ನಾನೇ ಸ್ವತಃ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇನೆ ಎಂದರು.