ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ಕೆಬಿಜೆನ್ನೆಲ್ ಕಚೇರಿಯ ಕಿರಿಯ ಎಂಜಿನೀಯರ್ ನಿವಾಸದ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ 4.60 ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಪ್ರಕಾಶ ಈರಪ್ಪ ಗೊಡಬೋಳೆ ಆದಾಯಕ್ಕಿಂತ ಕೋಟ್ಯಂತರ ರೂ. ಅಕ್ರಮ ಆಸ್ತಿ ಗಳಿಸಿದ ಇಂಡಿ ಕೆಬಿಜೆನ್ನೆಲ್ ಕಿರಿಯ ಇಂಜನೀಯರ್. ಈ ಆಪಾದಿತ ಎಂಜಿನೀಯರ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಲೋಕಾಯುಕ್ತರು, ನೌಕರನ ನಿವಾಸ ಶೋಧನೆಗೆ ನ್ಯಾಯಾಲಯದಿಂದ ವಾರಂಟ್ ಪಡೆದು, ಗುರುವಾರ ಆಪಾದಿತನ ಬೆಂಗಳೂರಿನ ಮಹಾದೇವಪುರ ವಿದ್ಯಾ ಹೆರಿಟೇಜ್ ಅಪಾರ್ಟಮೆಂಟ್‌ನಲ್ಲಿರುವ ಮನೆ, ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಬಿ. ಗ್ರಾಮದ ಮನೆ, ಅವರಿಗೆ ಸಂಬಂಧಿಸಿದ ಶಾಲೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಿದರು.
ಶೋಧ ಕಾರ್ಯ ವೇಳೆ ಆರೋಪಿಯ ಬೆಂಗಳೂರು ಮನೆಯಲ್ಲಿ 4 ಐಶಾರಾಮಿ ವಾಹನಗಳು, 21,97,500 ರೂ.ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಜೊತೆಗೆ, ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ. ಅಂದಾಜು 4.60 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ವಿಜಯಪುರ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ಇನ್ಸಪೆಕ್ಟರ್ ರಗಳಾದ ಆನಂದ ವಿ. ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ, ಬಾಬಾಸಾಹೇಬ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ವಿಜಯಪುರ, ಬಾಗಲಕೋಟೆ, ಬೀದರ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.




