ವಿಜಯಪುರ: ‘ನಮ್ಮ ಮಕ್ಕಳನ್ನು ಸುರಕ಼ಿತವಾಗಿ ನಮ್ಮ ಮಡಿಲು ಸೇರಿಸಿ….ಎಂದು ಉಕ್ರೇನ್ ನಲ್ಲಿ ಸಿಲುಕಿದ ಮಕ್ಕಳ ಪೋಷಕರು ಒಕ್ಕೊರೆಲಿನಿಂದ ಸರ್ಕಾರಗಳಿಗೆ ಮನವಿ ಮಾಡಿಕೊಂಡರು.
ನಮ್ಮ ಮಕ್ಕಳು ಸುರಕ್ಷಿತವಾಗಿ ನಮ್ಮ ಮಡಿಲು ಸೇರಿದರೆ ಸಾಕು, ಏನಾದರೂ ಮಾಡಿ, ಅಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಕಣ್ಣೀರು ಬರುತ್ತಿದೆ, ಸರ್ಕಾರ ಮಟ್ಟದಲ್ಲಿ ಗಂಭೀರವಾಗಿ ಪ್ರಯತ್ನಿಸಿ, ನಮ್ಮ ಮಕ್ಕಳನ್ನು ಕರೆ ತನ್ನಿ ಎಂದು ಮನವಿ ಮಾಡಿಕೊಂಡರು.
ವಿಜಯಪುರದ ಮರ್ಚ್ಂಟ್ ಅಸೋಸಿಯೇಷನ್ ಮಂಗಲ ಕಾರ್ಯಾಲಯದಲ್ಲಿ ಸಭೆ ಸೇರಿದ ೧೦ ಕ್ಕೂ ಹೆಚ್ಚು ನೊಂದ ಪಾಲಕರು ಈ ಕುರಿತಂತೆ ಮನವಿ ಮಾಡಿಕೊಂಡರು.
ಉಕ್ರೇನ್ ನಲ್ಲಿರುವ ವೈದ್ಯಕೀಯ ವಿದ್ಯಾರ್ಥಿನಿ ಸುಚಿತ್ರಾ ಕವಡಿಮಟ್ಟಿ ಅವರ ತಂದೆ ಮಲ್ಲನಗೌಡ ಕವಡಿಮಟ್ಟಿ, ವೈದ್ಯಕೀಯ ವಿದ್ಯಾರ್ಥಿ ಅಮನ್ ಮಮದಾಪೂರ ಅವರ ತಂದೆ ಧರ್ಮರಾಯ ಮಮದಾಪೂರ ಮೊದಲಾದವರು ಮನವಿ ಮಾಡಿಕೊಂಡರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಾಲಕರ ಮನವಿ ಆಲಿಸಿ, ತಾವು ಸಹ ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿ ಪಾಲಕರಿಗೆ ಅಭಯ ತುಂಬಿದರು.