ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಬಾಣಂತಿಯರ ನರಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಮೇ 17 ರಂದು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 21 ಬಾಣಂತಿಯರ ಸಿಜೇರಿಯನ್ ಹೊಲಿಗೆ ಬಿಚ್ಚಿಕೊಂಡು ಸೋಂಕು ಕಾಣಿಸಿಕೊಂಡಿತ್ತು. ಅದಕ್ಕಾಗಿ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಯು/ಎಸ್, 7(2) ಮತ್ತು 9(3)(ಎ) ನೇದ್ಧರಡಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಯರಗಲ್, ಶಸ್ತ್ರ ಚಿಕಿತ್ಸಕ ಡಾ.ಸಂಗಣ್ಣ ಲಕ್ಕಣ್ಣವರ, ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ.ಎ.ಜಿ.ಬಿರಾದಾರ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅನುಸರಣಾ ವರದಿ ನೀಡುವಂತೆ ಆದೇಶಿಸಿರುವುದಾಗಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.