ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಕಲಬುರಗಿ ಹೈಕೋರ್ಟ್ಗೆ ರಿಟ್ ಪಿಟೀಷನ್ ಸಲ್ಲಿಕೆ ಆಗಿದ್ದು, ಇಂದು ಅಂತಿಮ ಹಂತದ ವಿಚಾರಣೆ ನಡೆದು ತೀರ್ಪು ಹೊರ ಬೀಳುವ ಸಾಧ್ಯತೆ ಇದೆ.
ಕಲಬುರಗಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು, ಮಧ್ಯಾಹ್ನದ ವೇಳೆಗೆ ತೀರ್ಪು ಹೊರ ಬೀಳುವ ಸಂಭವ ಇದೆ. ಅಕ್ಟೋಬರ್ 28ರಂದು ಪಾಲಿಕೆ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಿರುವ ರಾಜ್ಯ ಚುನಾವಣಾ ಆಯೋಗಕ್ಕೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ
ಮಾಜಿ ಪಾಲಿಕೆ ಸದಸ್ಯರಾದ ಮೈನುದ್ದೀನ್ ಬೀಳಗಿ, ಇದ್ರೂಸ್ ಭಕ್ಷಿ ಅವರಿಂದ ರಿಟ್ ಪಿಟೀಷನ್ ಸಲ್ಲಿಕೆ ಮಾಡಿದ್ದು, ನೂತನ ಪರಿಷ್ಕೃತ ಮೀಸಲಾತಿ ಪಟ್ಟಿಯಲ್ಲಿ ಶೇಕಡಾ 50 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಿಲ್ಲ. ಅವೈಜ್ಞಾನಿಕ ವಾರ್ಡ್ ಗಳ ವಿಂಗಡನೆ ಮಾಡಲಾಗಿದೆ.
26 ವಾರ್ಡ್ ಗಳಲ್ಲಿ ಮೀಸಲಾತಿ ಬದಲಾವಣೆ ಹಾಗೂ ಇತರೆ ಕಾರಣ ಉಲ್ಲೇಖಿಸಿ ರಿಟ್ ಪಿಟೀಷನ್ ಸಲ್ಲಿಕೆ ಮಾಡಲಾಗಿದೆ. ಕಲಬುರಗಿ ಹೈಕೋರ್ಟಿಗೆ ಕಳೆದ ಸಪ್ಟೆಂಬರ್ 27 ರಂದು ರಿಟ್ ಪಿಟೀಷನ್ ಸಲ್ಲಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಯ ಪರವಾಗಿ ನ್ಯಾಯವಾಗಿ ಅಮರೇಶ ರೋಝಾ ವಾದ ಮಂಡನೆ ಮಾಡಲಿದ್ದಾರೆ. ಇನ್ನೂ ಅಂತಿಮ ವಿಚಾರಣೆ ನಡೆದ ಬಳಿಕ ಅಂತಿಮ ತೀರ್ಪು ಪ್ರಕಟ ಸಾಧ್ಯತೆ ಆಗಲಿದೆ.