ವಿಜಯಪುರ, ಡಿ. 20: ಭಾರತ ಹೆರಳವಾದ ಪ್ರಾಕೃತಿಕ ಸಂಪನ್ಮೂಲ ಮತ್ತು ಯುವ ಶಕ್ತಿಯ ಕಣಜವಾಗಿದ್ದು, ಇಲ್ಲಿನ ಯುವಕರು ಮಾತಿಗಿಂತ ಕಾಯಕದ ಮೂಲಕ ಅಭಿವೃದ್ಧಿಗೆ ಅವರದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ IEEE-INNOVA-2024 ಕಾರ್ಯಕ್ರಮದಲ್ಲಿ ಇಂದು ಶುಕ್ರವಾರ ಮಾತನಾಡಿದರು.
ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಸಿಂಗಾಪುರ ಜೊತೆ ಆರೋಗ್ಯಯುತ ಸ್ಪರ್ಧೆ ಮಾಡುತ್ತಿದೆ. ರಾಜ್ಯ ಸರಕಾರ ಬೆಂಗಳೂರು ಹೊರತು ಪಡಿಸಿ ಬಿಯಾಂಡ್ ಬೆಂಗಳೂರು ಯೋಜನೆಯಂತೆ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಇತರ ಜಿಲ್ಲೆಗಳಿಗೂ ಆದ್ಯತೆ ನೀಡುತ್ತಿದೆ. ಉತ್ತರ ಕರ್ನಾಟಕದ ಯುವಕರು ಹೆಚ್ಚು ಪ್ರತಿಭಾವಂತರಾಗಿದ್ದು, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಿಯತ್ತಿನಿಂದ ಕೆಲಸ ಮಾಡುತ್ತಾರೆ. ಅವರಿಗೆ ಆಂಗ್ಲಭಾಷೆಯ ಸಂವಹನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಬೃಹತ್ ಉದ್ಯೋಗ ಮೇಳ ಆಯೋಜಿಸುವ ಮೂಲಕ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೇಶ- ವಿದೇಶಗಳ ಹೆಸರಾಂತ ಉದ್ಯಮ ಮತ್ತು ಉದ್ಯಮಿಗಳನ್ನು ಕರ್ನಾಟಕದಲ್ಲಿಯೇ ಹೂಡಿಕೆ ಮಾಡಿ ಉತ್ಪಾದನೆಗೆ ಆಹ್ವಾನ ನೀಡುತ್ತಿದ್ದೇವೆ. ಬೆಂಗಳೂರು ಐಟಿ ರಾಜಧಾನಿಯಾಗಿದ್ದು, ಎರೊಸ್ಪೇಸ್ ನಲ್ಲಿಯೂ ಮುಂಚೂಣಿಯಲ್ಲಿದೆ. ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ. ಇದು ನಮ್ಮ ದೇಶದ ಶಕ್ತಿಯಾಗಿದೆ. ಏರೊಸ್ಪೇಸ್ ವಿಭಾಗದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಐಟಿಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಮಶೀನ್ ಟೂಲ್ಸ್ ನಲ್ಲಿ ನಂಬರ್ 1 ಸ್ಥಾನದಲ್ಲಿದ್ದೇವೆ. ಉದ್ಯಮಗಳಿಗೆ ಹಸಿರು ವಿದ್ಯುತ್ ಭವಿಷ್ಯದ ವಿದ್ಯುತ್ ಶಕ್ತಿಯಾಗಿದೆ. ಮಿನರಲ್ಸ್ ನಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಅತೀ ದೊಡ್ಡ ಸ್ಟೀಲ್ ಕಾರ್ಖಾನೆ ಜಿಂದಾಲ್ ನಮ್ಮ ರಾಜ್ಯದಲ್ಲಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕೈಗಾರಿಕೆಗಳು ನಮ್ಮಲ್ಲಿವೆ. ಇಲ್ಲಿನ ವೈದ್ಯಕೀಯ, ಎಂಜಿನಿಯರಿಂಗ್, ಫಾರ್ಮಸಿ ಕಾಲೇಜುಗಳು ಹೊರ ರಾಜ್ಯಗಳಷ್ಟೇ ಅಲ್ಲ ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಓದಲು ಆಕರ್ಷಿಸುತ್ತಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಿಂಗಾಪುರ ರೈಲ್ ಟೆಸ್ಟ ಸೆಂಟರ್ ಹಿರಿಯ ನಿರ್ದೇಶಕ ಸಿಮ್ ವಿ ಮೆಂಗ್ ಮಾತನಾಡಿ ತಮ್ಮ ದೇಶಜದಲ್ಲಿರುವ ರೇಲ್ವೆ ಜಾಲ, ಅದರ ಉತ್ಕೃಷ್ಠ ತಾಂತ್ರಿಕತೆಯ ಕುರಿತು ಮಾತನಾಡಿದರು.
ಸ್ಯಾಮಸಂಗ್ ರಿಸರ್ಚ್ ಹಿರಿಯ ನಿರ್ದೇಶಕ ಶ್ರೀನಿವಾಸನ್ ಸ್ವಾಮಿನಾಥನ ಮಾತನಾಡಿದರು.
ಈ ಸಂದರ್ಭದಲ್ಲಿ ಐಇಇಇ-ಎನ್.ಕೆ.ಎಸ್.ಎಸ್ ಅಧ್ಯಕ್ಷ ಪ್ರೊ. ರವಿ ಹೊಸಮನಿ, ಐಇಇಇ ಇಂಡಸ್ಟ್ರಿಯ ಡಾ. ಪ್ರಶಾಂತ ಮಿಶ್ರಾ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕಾಲೇಜಿನ ಡೈರೆಕ್ಟರ್ ಡಾ. ವಿ. ಜಿ. ಸಂಗಮ, ಸಮ್ಮೇಳನದ ಆಯೋಜಕ ಡಾ. ವಿರೇಶ ಗೋನಾಳ ಮುಂತಾದವರು ಉಪಸ್ಥಿತರಿದ್ದರು.
ಡಾ. ಅನುರಾಧಾ ಟಂಕಸಾಲಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪುಷ್ಪಾ ಬಿ. ಪಾಟೀಲ ವಂದಿಸಿದರು.
Minister MBP IEEE-INNOVA-2024 Programme*: ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಐಇಇಇ ಇನ್ನೊವ-2024 ಕಾರ್ಯಕ್ರಮವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಮ್ ವಿ ಮೆಂಗ್, ಶ್ರೀನಿವಾಸನ್, ರವಿ ಹೊಸಮನಿ, ಡಾ. ಪ್ರಶಾಂತ ಮಿಶ್ರಾ, ಡಾ. ವೈ. ಎಂ. ಜಯರಾಜ, ಡಾ. ವಿ. ಜಿ. ಸಂಗಮ, ಡಾ. ವಿರೇಶ ಗೋನಾಳ ಮುಂತಾದವರು ಉಪಸ್ಥಿತರಿದ್ದರು.
2. Minister MBP IEEE-INNOVA-2024 Programme: ಸಚಿವ ಎಂಬಿಪಿ ಐಇಇಇ ಕಾರ್ಯಕ್ರಮದಲ್ಲಿ ಭಾಗಿ: ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಐಇಇಇ ಇನ್ನೊವ-2024 ಕಾರ್ಯಕ್ರಮದಲ್ಲಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಸಿಮ್ ವಿ ಮೆಂಗ್, ಶ್ರೀನಿವಾಸನ್, ರವಿ ಹೊಸಮನಿ, ಡಾ. ಪ್ರಶಾಂತ ಮಿಶ್ರಾ, ಡಾ. ವೈ. ಎಂ. ಜಯರಾಜ, ಡಾ. ವಿ. ಜಿ. ಸಂಗಮ, ಡಾ. ವಿರೇಶ ಗೋನಾಳ ಮುಂತಾದವರು ಉಪಸ್ಥಿತರಿದ್ದರು.