ವಿಜಯಪುರ: ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸ್ಥಿತಿಗತಿ ತಿಳಿಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಮೇ 11ರಂದು ಜಿಲ್ಲಾಧಿಕಾರಿಗಳೊಂದಿಗೆ ಇಂಡಿ ತಾಲೂಕಿನ ಬಬಲಾದ, ಹಳಗುಣಕಿ, ಬಸನಾಳ ಮತ್ತು ಹಂಜಗಿ ಗ್ರಾಮಗಳಲ್ಲಿ ಸಂಚರಿಸಿದರು.
ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಲ್ಲಿ ಈಗಾಗಲೇ ಟ್ಯಾಂಕರಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸಿಇಓ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೆ ವೇಳೆ ಸಿಇಓ ಅವರು, ಬಸನಾಳ ಮತ್ತು ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರೊಂದಿಗೆ
ಮಾತನಾಡಿದರು.
ಕೂಲಿ ಮೊತ್ತವನ್ನು ಬೇಗನೆ ಜಮಾ ಮಾಡಿಸಬೇಕು ಎಂದು ಇದೆ ವೇಳೆ ಕಾರ್ಮಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ಅವರು, ಸರಿಯಾದ ಸಮಯಕ್ಕೆ ಕೂಲಿ ಹಣ ಜಮೆ ಮಾಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಮಾತನಾಡಿದ ಸಿಇಓ ಅವರು, ನರೇಗಾ ಯೋಜನೆಯಡಿ ಇನ್ನು ಹೆಚ್ಚಿನ ಉದ್ಯೋಗ ಪಡೆಯಲು ವಿಶೇಷಚೇತನರು ಸೇರಿದಂತೆ ಮಹಿಳಾ ಕೂಲಿ ಕಾರ್ಮಿಕರು ಮುಂದೆ ಬರಬೇಕು ಎಂದು ಮನವಿ ಮಾಡಿದರು.
*ಸ್ಥಳ ಪರಿಶೀಲನೆ*: ಇದೆ ವೇಳೆ ಸಿಇಓ ಅವರು ಇಂಡಿ ತಾಲೂಕಿನ ಮಾವಿನಹಳ್ಳಿ ಬಳಿ ಇರುವ ಕಾಲುವೆಗೆ ಭೇಟಿ ನೀಡಿದರು. ಕಾಲುವೆಗೆ ನೀರು ಹರಿಸಿದಲ್ಲಿ ಸುತ್ತಲಿನ ಹಳ್ಳಿಗಳಿಗೆ ನೀರಿನ ಅನುಕೂಲ ಆಗುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
*ಅಧಿಕಾರಿಗಳಿಂದ ಮಾಹಿತಿ:*
ಇಂಡಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಿಇಓ ಅವರು, ಟ್ಯಾಂಕರ್ ಮೂಲಕ ಪ್ರತಿ ಮನೆ-ಮನೆಗಳಿಗೆ ಅವಶ್ಯವಿರುವಷ್ಟು ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಪಿಡಿಓಗಳಿಗೆ ನಿರ್ದೇಶನ ನೀಡಿದರು. ನೀರಿನ ಪ್ರಮಾಣವನ್ನು ಹೆಚ್ಚಿಸಬೇಕಾಗಿರುವ ಗ್ರಾಮಗಳ ಹೆಸರುಗಳನ್ನು ಪಡೆದುಕೊಂಡರು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆ, ಕಾಲುವೆಗಳು ಇರುವ ಮಾಹಿತಿ ಪಡೆದು ಯಾವ ಕಾಲುವೆಗೆ ನೀರು ಹರಿಸಿದರೆ ಎಷ್ಟು ಹಳ್ಳಿಗಳಿಗೆ ನೀರು ಪೂರೈಕೆ ಮಾಡಬಹುದೆಂದು ಚರ್ಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಾಮಚಂದ್ರ ಗಡದ,
ಇಂಡಿ ತಾಲೂಕಿನ ತಹಶೀಲ್ದಾರ ಸಿ.ಎಸ್. ಕುಲಕರ್ಣಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸುನೀಲ ಮದ್ದಿನ, ಸಹಾಯಕ ನಿರ್ದೇಶಕರಾದ ಸಂಜಯ ಖಡಗೇಕರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರುದ್ರವಾಡಿ, ತಾಂತ್ರಿಕ ಸಹಾಯಕ ಶ್ರೀನಿವಾಸ ಪತಂಗೆ ಹಾಗೂ ಇತರರು ಹಾಜರಿದ್ದರು.