ವಿಜಯಪುರ: ಲಿಂಗಾಯತರಲ್ಲಿ ಗೊಂದಲ ಮೂಡಿಸಿ ಒಡೆದಾಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ, ಬಿಜೆಪಿ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ಪ್ರವೃತ್ತಿ ಬೆಳೆಸಿಕೊಂಡಿದೆ ಎಂದು ಕಾಂಗ್ರೆಸ್ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ.ರವಿ ಬಿರಾದಾರ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.40 ರಷ್ಟು ಕಮೀಷನ್ ಭ್ರಷ್ಟಾಚಾರ ಎಲ್ಲ ವಲಯಗಳಲ್ಲೂ ತಾಂಡವವಾಡುತ್ತಿದೆ, ಇದನ್ನು ಪ್ರಶ್ನಿಸಿದರೆ ಬಿಜೆಪಿ ಸಚಿವರು ಕಾಂಗ್ರೆಸ್ ಪಕ್ಷದವರು ಲಿಂಗಾಯತ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಭ್ರಷ್ಟಾಚಾರ ಯಾರು ಮಾಡಿದರೂ ಸಹ ತಪ್ಪೇ, ಲಿಂಗಾಯತರು ಸಹ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದರು.
ಈ ಹಿಂದೆ ಮೋದಿ ಅವರು ಕರ್ನಾಟಕಕ್ಕೆ ಬಂದು ಸಿದ್ಧರಾಮಯ್ಯ ಸರ್ಕಾರವನ್ನು ಶೇ.10 ರಷ್ಟು ಕಮೀಷನ್ ಸರ್ಕಾರ ಎಂದು ಕರೆದಾಗ ಕಾಂಗ್ರೆಸ್ ಸಾತ್ವಿಕ ಟೀಕೆ ಮಾಡಿತು ಹೊರತು ಮೋದಿ ಹಾಲುಮತ ಸಮಾಜದ ಸಿದ್ಧರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಲಿಲ್ಲ ಎಂದರು.
ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಈ ರೀತಿಯ ಒಡೆದಾಳುವ ನೀತಿ ಅನುಸರಿಸುತ್ತಿದೆ, ಲಿಂಗಾಯತ ಸಮಾಜದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಳಿಸಿದ್ದು ಯಾರು? ಯತ್ನಾಳ, ಬೆಲ್ಲದ ಅವರಂತಹ ನಾಯಕರನ್ನು ಬಳಸಿ ಬಿಸಾಡಿದ್ದಾರೆ ಎಂದರು. ಬಡ ಲಿಂಗಾಯತರನ್ನು ಅನುಕೂಲ ಕಲ್ಪಿಸಲು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸುವ ಪ್ರಯತ್ನ ನಡೆಯಿತು. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂರು ವಿರೋಧಿಸಲಿಲ್ಲ, ಆದರೆ ಬಿಜೆಪಿ, ಆರ್ಎಸ್ಎಸ್ ಲಿಂಗಾಯತರಲ್ಲಿಯೇ ಗೊಂದಲ ಮೂಡಿಸಿ ಇದು ಸಾಧ್ಯವಾಗದಂತೆ ಮಾಡಿತು, ನಿಜವಾದ ಅನ್ಯಾಯವನ್ನು ಬಿಜೆಪಿ ಲಿಂಗಾಯತರಿಗೆ ಮಾಡುತ್ತಿದೆ ಎಂದರು.
ಬಿಜೆಪಿ ಎಂದರೆ ಬಡವರ ವಿರೋಧಿ, ಭ್ರಷ್ಟಾಚಾರಿ ಹಾಗೂ ತಮ್ಮ ಪಕ್ಷದ ಶಾಸಕರು, ಸಚಿವರು ಆಪಾದನೆಯಲ್ಲಿ ಸಿಲುಕಿದರೂ ಅದನ್ನು ಬಿ-ರಿಪೋರ್ಟ್ ಹಾಕಿಸುವ ಪ್ರವೃತ್ತಿಯ ಪಕ್ಷ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಮುಖಂಡ ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.