ವಿಜಯಪುರ ::
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಭಾರತವನ್ನು ಅಭಿವೃದ್ಧಿ ಪಥದತ್ತ ಮತ್ತಷ್ಟು ಮುನ್ನಡೆಸಿ ವಿಶ್ವದ ೩ ನೇ ದೊಡ್ಡ ಆರ್ಥಿಕತೆ ಇರುವ ದೇಶವಾಗಿ ದಾಪುಗಾಲು ಇರಿಸುವ ನಿಟ್ಟಿನಲ್ಲಿ ಮುನ್ನಡೆ ಇರಿಸಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನಸಾಮಾನ್ಯರಿಗೆ ಯಾವ ರೀತಿ ತೆರಿಗೆ ಹೊರೆ ಏರಿಕೆ ಮಾಡದೇ ಜನಸಾಮಾನ್ಯರ ಪರವಾದ ಬಜೆಟ್ ಮಂಡಿಸಿದ್ದಾರೆ, ಕೃಷಿಕರಿಗೆ ಅವರ ಭಾಷೆಯಲ್ಲಿಯೇ ಕೃಷಿ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಅಭಿವೃದ್ಧಿ, ಹೈನುಗಾರಿಕೆಗೆ ಉತ್ತೇಜನ ನೀಡಿದೆ. ಒಂದು ರೀತಿ ಭಾರತವನ್ನು ಜಾಗತಿಕ ಬಯೋಫಾರ್ಮ್ ಶಕ್ತಿಯ ಹಬ್ ಆಗಿಸುವ ನಿಟ್ಟಿನಲ್ಲಿ ಮುನ್ನಡೆಯುವ ಹೆಜ್ಜೆಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದಾರೆ, ಅನೇಕ ಮಹತ್ವದ ವಸ್ತುಗಳ ಬೆಲೆ ಇಳಿಕೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ತಾಂತ್ರಿಕ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಜನೆಗೆ ಆದ್ಯತೆ ನೀಡಿರುವುದು ಸಂತೋಷ ತಂದಿದೆ. ತಂತ್ರಜ್ಞಾನ ಮತ್ತು ಫ್ರಂಟಿಯರ್ ಕ್ಷೇತ್ರಗಳಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸುವ ಸ್ಪಷ್ಟ ದೃಷ್ಟಿಯನ್ನು ಕೇಂದ್ರ ಬಜೆಟ್ 2026–27 ಮುಂದಿಟ್ಟಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ, ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ₹40,000 ಕೋಟಿ ವೆಚ್ಚ ವೃದ್ಧಿ, ಹೊಸ ಕೈಗಾರಿಕಾ ಕ್ಲಸ್ಟರ್‌ಗಳ ಹೂಡಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕೇಂದ್ರ ಬಜೆಟ್ ರೈತ ಶ್ರೀ ಸಾಮಾನ್ಯನ ಪರವಾಗಿರುವ ಬಜೆಟ್ ಆಗಿದೆ, ಯಾವ ತೆರಿಗೆ ಹೊರೆಸದೇ ಜನಸಾಮಾನ್ಯ ಸ್ನೇಹಿ ಬಜೆಟ್ ಇದಾಗಿದೆ, ಕೃಷಿ ರಂಗ ಉತ್ತೇಜನ, ಉದ್ಯೋಗ ಸೃಷ್ಟಿ ಆದ್ಯತೆ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಭವಿಷ್ಯದ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗಾಗಿ 10,000 ಕೋಟಿ ರೂ. ಬೆಳವಣಿಗೆ ನಿಧಿಯನ್ನು ಘೋಷಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತಾ ವಲಯವಾಗಿ ಪರಿಗಣಿಸಿರುವುದು ವಿಜ್ಞಾನ ಶಿಕ್ಷಣ ಪಡೆದವರಿಗೆ ವರವಾಗಿ ಪರಿಗಣಿಸಲಿದ್ದು, ಈ ಬಜೆಟ್ ಆರ್ಥಿಕ ಪ್ರಗತಿಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಪ್ರತಿಕ್ರಿಯೆ ನೀಡಿ,
ಹಣಕಾಸಿನ ಒತ್ತಡದಲ್ಲಿರುವ 200 ಸಾಂಪ್ರದಾಯಿಕ ಕೈಗಾರಿಕಾ ಕ್ಲಸ್ಟರ್‌ಗಳ ಪುನರುಜ್ಜೀವನಕ್ಕೆ ಕ್ರಮ, ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆ ಮಾಡಿರುವುದು ಆರೋಗ್ಯ ವಲಯಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಪ್ರತಿಕ್ರಿಯೆ ನೀಡಿ, ದೇಶದ ಪ್ರಮುಖ ನಗರಗಳ ನಡುವೆ 7 ಹೊಸ ಹೈ-ಸ್ಪೀಡ್ ರೈಲು ಮಾರ್ಗಗಳನ್ನು ಘೋಷಿಸಲಾಗಿದ್ದು, ಇದರಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳೂ ಸೇರಿವೆ.
ದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡಿರುವುದು ಪ್ರಗತಿಗೆ ಮುನ್ನುಡಿ ಬರೆಯಲಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ಪ್ರಮುಖ ವಿಜಯ ಜೋಶಿ ಪ್ರತಿಕ್ರಿಯೆ ನೀಡಿ, ರಾಸಾಯನಿಕ ಪಾರ್ಕ್ ಸ್ಥಾಪನೆ, ನಿರ್ಮಾಣ ಹಾಗೂ ಮೂಲ ಸೌಕರ್ಯಗಳ ಬಲವರ್ಧನೆಗೆ ಸಿಐಇ ಯೋಜನೆ ಆರಂಭದ ಮೂಲಕ ಅಭಿವೃದ್ಧಿಗೆ ಮೈಲುಗಲ್ಲು ಆಗಲಿದೆ ಎಂದು ಅವರು ಹೇಳಿದ್ದಾರೆ.




