ವಿಜಯಪುರ: ರಾಜಾಹುಲಿಗೆ ನಿವೃತ್ತಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಣಸ್ವಾಮಿ ಹೇಳಿದರು. ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡವರ ವಿಚಾರ ನಾನು ಮಾತನಾಡಲ್ಲ. ಆದ್ರೇ, ಎಲ್ಲರ ಬಗ್ಗೆ ಬಿಎಸ್ ಯಡಿಯೂರಪ್ಪ ಕಾಳಜಿವಹಿಸುತ್ತಾರೆ. ಎಲ್ಲರನ್ನೂ ಬೆಳೆಸಿದ್ದಾರೆ. ಅದಕ್ಕಾಗಿ ಇನ್ನಷ್ಟು ಪಕ್ಷವನ್ನು ಬೆಳೆಸುವ ಸಲುವಾಗಿ ಆರೋಗ್ಯ ಆಯುಷ್ಯವನ್ನು ದೇವರು ನೀಡಲಿ ಎಂದರು.
ಬಿಎಸ್ವೈ ನಮ್ಮ ನಾಯಕರು. ಬಿಎಸ್ವೈ ಪಕ್ಷದಿಂದ ದೂರು ಸರಿಯುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಂದ್ರೇ ಮತ್ತೊಂದು ಹೆಸರೇ ಬಿಎಸ್ ಯಡಿಯೂರಪ್ಪ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿ.ಎಂ. ಸ್ಥಾನ ಸಿಗುವ ಹಂತದಲ್ಲಿ ದಲಿತ ನಾಯಕತ್ವವನ್ನು ವ್ಯವಸ್ಥಿತ ದಮನ ಮಾಡುತ್ತಲೇ ಬರಲಾಗುತ್ತಿದೆ. ಆದರೆ ಬಿಜೆಪಿ ಪಕ್ಷ ಹೋರಾಟಕ್ಕೆ ಅವಕಾಶ ಇಲ್ಲದಂತೆ, ಯಾರನ್ನೂ ಕೇಳದೇ, ಹೇಳದೇ ದಲಿತರಿಗೆ ರಾಷ್ಟ್ರಪತಿ ಹುದ್ದೆಯಿಂದ ಏನೆಲ್ಲ ರಾಜಕೀಯ ಅವಕಾಶ ನೀಡುತ್ತಿದೆ. ಹೀಗೆ ಕಾಂಗ್ರೆಸ್ ದಲಿತ ನಾಯಕತ್ವವನ್ನು ತುಳಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಇದೆ. ಕೇವಲ ಆರು ವರ್ಷದ ಹಿಂದೆ ಪಕ್ಷಕ್ಕೆ ಬಂದ ಸಿದ್ದರಾಮಯ್ಯ ಇಡೀ ದಲಿತ ನಾಯಕತ್ವವನ್ನೇ ದಮನ ಮಾಡಿ ಮುಖ್ಯಮಂತ್ರಿಯಾದರು ಎಂದು ಹರಿಹಾಯ್ದರು.
ಆದರೆ ಬಿಜೆಪಿ ಪಕ್ಷದಲ್ಲಿ ಹೋರಾಟ ಮಾಡದೇ, ಆಗ್ರಹ ಮಾಡದೇ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದೆ. ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯಿಂದ ವಿವಿಧ ರಾಜ್ಯಗಳಲ್ಲಿ ದಲಿತರಿಗೆ ಹತ್ತು ಹಲವು ರಾಜಕೀಯ ಅಧಿಕಾರ ನೀಡಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ 60 ಸ್ಥಾನ ಗೆಲ್ಲುವುದೂ ಕಷ್ಟವಾಗಿರುವ ದುಸ್ಥಿತಿ ಇದ್ದರೂ ಇಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಡಜನ್ ನಾಯಕರು ಈಗಲೇ ಕಿತ್ತಾಟ ಆರಂಭಿಸಿದ್ದಾರೆ. ಆದರೆ ಬಿಜೆಪಿ 150 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದರು.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ, ವಿಜಯ ಜೋಶಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.