ವಿಜಯಪುರ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸಿಎಂ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸಲು ವ್ಯವಸ್ಥಿತವಾಗಿ ತಯಾರಿ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು,
ಒಬ್ಬ ಸ್ವಾಮಿಜಿ ಜೊತೆಗೆ ಮಾತನಾಡಿ ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯನವರನ್ನು ಇಳಿಸಲು ನಮಗೆ ಲಿಂಗಾಯತರು ಸಪೋರ್ಟ ಮಾಡಬೇಕೆಂದು ಡಿಕೆಶಿ ಹೇಳಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾದ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆ ಮುಗಿದ 15 ದಿನದಲ್ಲೇ ಸಿಎಂ ಆಗುವ ಕನಸು ಡಿ ಕೆ ಶಿವಕುಮಾರ್ ಕಾಣುತ್ತಿದ್ದಾರೆ. ಹೀಗಾಗಿ ಲಿಂಗಾಯತರು, ಒಕ್ಕಲಿಗರು ಒಂದು ಎಂಬ ಸಂದೇಶ ಕೊಡಲು ಒಬ್ಬ ಸ್ವಾಮೀಜಿ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಶಿವಾನಂದ ಪಾಟೀಲ ಅವರ ಮಗಳನ್ನು ಗೆಲ್ಲಿಸಿದರೆ, ಸಚಿವ ಶಿವಾನಂದ ಪಾಟೀಲ ಹಾಗೂ ನಾನು ಸೇರಿಕೊಂಡು ಸಿದ್ದರಾಮಯ್ಯ ನವರನ್ನು ಇಳಿಸುವ ಕಾರ್ಯತಂತ್ರ ಮಾಡಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಇನ್ನೂ ಒಡೆದು ಹೋಗಿ ಹೊಸ ಸರ್ಕಾರ ರಚನೆಯಾಗುತ್ತದೆ. ಸಿದ್ದರಾಮಯ್ಯನವರಿಗೆ ಕಿವಿಮಾತು ಏನಂದ್ರೇ ಡಿಕೆ ಶಿವಕುಮಾರ್ ಪರವಾದ ಅಭ್ಯರ್ಥಿ ಗಳನ್ನು ಸೋಲಿಸದಿದ್ದರೆ ನಿಮ್ಮು ಮುಖ್ಯಮಂತ್ರಿ ಹುದ್ದೆ ಹೋಗುವದು ಗ್ಯಾರಂಟಿ. ಐದು ಗ್ಯಾರಂಟಿಗಳ ಜೊತೆಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಹೋಗುವದು ಇದೊಂದು ಗ್ಯಾರಂಟಿ ಎಂದು ಭವಿಷ್ಯ ನುಡಿದರು. ಅದಕ್ಕಾಗಿ ನೀವು ಅವರ ಅಭ್ಯರ್ಥಿಗಳನ್ನು ಸೋಲಿಸಲೇಬೇಕು. ಇರದಿದ್ದರೆ ನಿಮ್ಮ ಸಿಎಂ ಹುದ್ದೆ ಹೋಗುವದು ಗ್ಯಾರಂಟಿ ಎಂದರು.